ಹೀರೋ ಆದ ಅದ್ನಾನ್

ತನ್ನ ವಿಶಿಷ್ಟ ಕಂಠಸ್ವರದಿಂದ ಸಂಗೀತ ಪ್ರೇಮಿಗಳನ್ನು ಮೋಡಿ ಮಾಡಿರುವ ಖ್ಯಾತ ಗಾಯಕ ಅದ್ನಾನ್‌ಸಾಮಿ ಸದ್ಯದಲ್ಲೇ ನಾಯಕನಾಗಲಿದ್ದಾರೆ. ಹೌದು. ಆದಿತಿ ರಾವ್ ಹಾಗೂ ವಿನಯ್ ಸಪ್ರೂ ಜೊತೆಯಾಗಿ ನಿರ್ದೇಶಲಿರುವ ‘ಅಫ್ಘಾನ್- ಇನ್ ಸರ್ಚ್ ಆಫ್ ಎ ಹೋಂ’ ಬಾಲಿವುಡ್ ಚಿತ್ರದಲ್ಲಿ ಅದ್ನಾನ್ ಹೀರೋ ಆಗಿ ಎಂಟ್ರಿ ಕೊಡಲಿದ್ದಾರೆ.
ಸಂಗೀತಪ್ರಧಾನವಾದ ಈ ಚಿತ್ರದಲ್ಲಿ ಯುದ್ಧಗ್ರಸ್ತ ಅಫ್ಘಾನಿಸ್ತಾನದಿಂದ ಪಾರಾಗಿ ಭಾರತಕ್ಕೆ ಬರುವ ನಿರಾಶ್ರಿತನ ಪಾತ್ರದಲ್ಲಿ ಅದ್ನಾನ್ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕಿ ರಾಧಿಕಾ, ಈ ಚಿತ್ರದ ಕಥೆಯನ್ನು ವಿವರಿಸಿದ ಕೂಡಲೇ ತಾನು ಉತ್ಸಾಹದಿಂದಲೇ ನಟಿಸಲು ಒಪ್ಪಿಕೊಂಡಿದ್ದಾಗಿ ಅದ್ನಾನ್ ಹೇಳುತ್ತಾರೆ. ಚಿತ್ರದ ಶೂಟಿಂಗ್ ಯಾವಾಗ ಆರಂಭವಾಗುವುದೆಂಬ ನಿರೀಕ್ಷೆಯಲ್ಲಿ ತಾನಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು ಅದ್ನಾನ್ ಅವರು ಅದಿತಿ ರಾವ್ ಹಾಗೂ ವಿನಯ್ ಸಫ್ರೂ ನಿರ್ದೇಶನದ ‘ಲಕ್ಕಿ.. ನೋ ಟೈಮ್ ಫಾರ್ ಲವ್’ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಇಷ್ಟಕ್ಕೂ ಅದ್ನಾನ್‌ಗೆ ಅಭಿನಯ ಹೊಸತೇನಲ್ಲ. ಗಾಯಕನಾಗಿ ಚಿತ್ರರಂಗವನ್ನು ಪ್ರವೇಶಿಸಿದ್ದ ಆನಂತರ ಕೆಲವು ಮ್ಯೂಸಿಕ್ ವೀಡಿಯೊಗಳಲ್ಲಿಯೂ ನಟಿಸಿ, ಗಮನ ಸೆಳೆದಿದ್ದರು. ಗಾಯಕನಾಗಿ ಮಿಂಚಿರುವ ಅದ್ನಾನ್, ನಾಯಕನಾಗಿಯೂ ಚಿತ್ರಪ್ರೇಮಿಗಳ ಮನಸೂರೆಗೊಳ್ಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.





