ದಿಢೀರ್ ತಪಾಸಣೆ ವೇಳೆ ಬೆಳಕಿಗೆ ಬಂದ ಪಡಿತರ ಧಾನ್ಯ ದುರ್ಬಳಕೆ
ದಿವ್ಯವಸ್ಥಾಪಕನ ವಿರುದ್ದ ಕೇಸ್ ದಾಖಲು - ಸಸ್ಪೆಂಡ್‍ಗೆ ಶಿಫಾರಸ್ಸು
ಶಿವಮೊಗ್ಗ, ಜು. 1: ಜಿಲ್ಲೆಯ ಸಾಗರ ತಾಲೂಕಿನ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಸಗಟು ಪಡಿತರ ದಾಸ್ತಾನು ಮಳಿಗೆಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿಯಿತ್ತು ಪರಿಶೀಲನೆ ನಡೆಸಿದ ವೇಳೆ, ಪಡಿತರದಾರರಿಗೆ ವಿತರಣೆ ಮಾಡಲು ದಾಸ್ತಾನು ಮಾಡಿದ್ದ ಪಡಿತರ ಅಕ್ಕಿ ಹಾಗೂ ಗೋಧಿ ದುರ್ಬಳಕೆಯಾಗಿರುವುದು ಬೆಳಕಿಗೆ ಬಂದಿದೆ.
162.05 ಕ್ವಿಂಟಾಲ್ ಅಕ್ಕಿ ಹಾಗೂ 12.89 ಕ್ವಿಂಟಾಲ್ ಗೋಧಿ ದುರ್ಬಳಕೆಯಾಗಿರುವುದನ್ನು ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ. ಈ ಸಂಬಂಧ ಮಳಿಗೆ ವ್ಯವಸ್ಥಾಪಕರಾದ ನಾಗರಾಜ್ ಎಂಬುವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಜೊತೆಗೆ ಇವರ ಮೇಲೆ ಅಗತ್ಯ ವಸ್ತುಗಳ ಕಾಯ್ದೆ ಸೆಕ್ಷನ್ 3 ಮತ್ತು 7 ಹಾಗೂ ಇತರೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಆಹಾರ - ನಾಗರೀಕ ಸರಬರಾಜು ನಿಗಮದ ವ್ಯವಸ್ಥಾಪಕರು ಮತ್ತು ಸಾಗರ ಆಹಾರ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಹಾಗೆಯೇ ವ್ಯವಸ್ಥಾಪಕರಾದ ನಾಗರಾಜ್‍ರವರನ್ನು ಅಮಾನತ್ತುಗೊಳಿಸಲು ಕೆಎಫ್‍ಸಿಎಸ್‍ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕರಾದ ಲಕ್ಷ್ಮೀನಾರಾಯಣರವರು ಮಾಹಿತಿ ನೀಡಿದ್ದಾರೆ.
ದಿಢೀರ್ ತಪಾಸಣೆ: ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್‍ರವರ ಸೂಚನೆಯ ಮೇರೆಗೆ ಆಹಾರ ಶಿರಸ್ತೇದಾರ್, ಆಹಾರ ನಿರೀಕ್ಷಕರು ಮತ್ತು ಕೆಎಫ್‍ಸಿಎಸ್‍ಸಿ ಜಿಲ್ಲಾ ವ್ಯವಸ್ಥಾಪಕರ ಅಧಿತಂಡವು ಸಾಗರದ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಸಗಟು ಪಡಿತರ ದಾಸ್ತಾನು ಮಳಿಗೆಗೆ ದಿಢೀರ್ ಭೇಟಿಯಿತ್ತು ಪರಿಶೀಲನೆ ನಡೆಸಿತ್ತು. ಜೂನ್ 29 ಮತ್ತು 30 ರಂದು ಸತತ ಎರಡು ದಿನಗಳ ಕಾಲ ತಪಾಸಣೆ ನಡೆಸಿತ್ತು.
ಈ ವೇಳೆ ದಾಸ್ತಾನು ಮಳಿಗೆಯಲ್ಲಿ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲು ದಾಸ್ತಾನು ಮಾಡಲಾಗಿದ್ದ ಅಕ್ಕಿ ಹಾಗೂ ಗೋಧಿಯನ್ನು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು.







