GST: ಏನು? ಹೇಗೆ? ಪರಿಣಾಮಗಳೇನು ?
ಮಹತ್ವದ ಮಾಹಿತಿಗಳು

ಹೊಸದಿಲ್ಲಿ, ಜು.1: ಸರಕುಗಳು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಒಂದು ಐತಿಹಾಸಿಕ ತೆರಿಗೆ ಸುಧಾರಣೆಯಾಗಿದ್ದು ಈಗಾಗಲೇ ಜಾರಿಗೆ ಬಂದಿದೆ. ಇದು ದೇಶದಲ್ಲಿ ಕೇಂದ್ರೀಯ ಮತ್ತು ರಾಜ್ಯಗಳ ತೆರಿಗೆಗಳು ಸೇರಿದಂತೆ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಲಿದೆ. ಜಿಎಸ್ ಟಿಯನ್ನು ಕೇಂದ್ರ ಮತ್ತು ರಾಜ್ಯಗಳು ಜತೆಗೂಡಿ ನಿರ್ವಹಿಸಲಿವೆ.
ಜಿಎಸ್ ಟಿ ಯಾಕೆ ಮಹತ್ವದ್ದು?: ಜಿಎಸ್ ಟಿ ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣೆಯಾಗಿದ್ದು ‘ಒಂದು ರಾಷ್ಟ್ರ-ಒಂದು ತೆರಿಗೆ-ಒಂದು ಮಾರುಕಟ್ಟೆ’ ಗುರಿಯ ಸಾಕಾರಕ್ಕೆ ಎಡೆ ಮಾಡಿಕೊಡಲಿದೆ. ಇದರಿಂದ ಉದ್ಯಮ, ಸರಕಾರ ಹಾಗೂ ಗ್ರಾಹಕ – ಮೂರೂ ವಲಯಗಳಿಗೆ ಪ್ರಯೋಜನವಾಗಲಿದೆ. ಇದರಿಂದ ಸರಕುಗಳು ಹಾಗೂ ಸೇವೆಗಳ ಬೆಲೆ ತಗ್ಗುವುದರ ಜತೆಗೆ ಆರ್ಥಿಕ ರಂಗಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಉತ್ಪನ್ನಗಳು ಹಾಗೂ ಸೇವೆಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗುವುದರ ಜತೆಗೆ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೂ ಹೆಚ್ಚಿನ ಪ್ರೊತ್ಸಾಹ ದೊರಕಲಿದೆ. ಜಿಎಸ್ ಟಿಯಿಂದಾಗಿ ಆರ್ಥಿಕ ಅಡೆತಡೆಗಳು ನಿವಾರಣೆಯಾಗಿ ಇಡೀ ದೇಶ ಏಕರೂಪದ ತೆರಿಗೆ ದರ ಹಾಗೂ ಪದ್ಧತಿಗಳನ್ನೊಳಗೊಂಡ ಸಾಮಾನ್ಯ ಮಾರುಕಟ್ಟೆಯಾಗಿ ರೂಪುಗೊಳ್ಳಲಿದೆ. ಇದು ಬಹುತೇಕ ತಂತ್ರಜ್ಞಾನ ಆಧರಿತವಾಗಿದ್ದು ಮಾನವ ಹಸ್ತಕ್ಷೇಪವನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಲಿದೆ. ಜಿಎಸ್ ಟಿ ದೇಶದಲ್ಲಿ ಸುಗಮ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಿದೆ.
ಹೆಚ್ಚಿನ ಸರಕುಗಳಿಗೆ ಸಂಬಂಧಿಸಿ ಜಿಎಸ್ ಟಿ ಮಂಡಳಿ ಅನುಮೋದನೆ ನೀಡಿರುವ ತೆರಿಗೆಗಳು ಕೇಂದ್ರ ಮತ್ತು ರಾಜ್ಯಗಳು ಈಗ ವಿಧಿಸುತ್ತಿರುವ ಪರೋಕ್ಷ ತೆರಿಗೆ ದರಗಳಿಗಿಂತ ಸಾಕಷ್ಟು ಕಡಿಮೆ ಇವೆ.
2016ರ ಸಾಂವಿಧಾನಿಕ ತಿದ್ದುಪಡಿಯ ಬಳಿಕ ಜಿಎಸ್ ಟಿ ಸಾಗಿ ಬಂದ ಹಾದಿ: 2016ರ ಸೆಪ್ಟೆಂಬರ್ 8ರಂದು ರಾಷ್ಟ್ರಪತಿ ಅವರ ಅಂಕಿತ ದೊರೆತ ಬಳಿಕ 101ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ ಜಾರಿಗೆ ಬಂತು. 2016ರ ಸೆಪ್ಟೆಂಬರ್ 15ರಂದು ಜಿಎಸ್ ಟಿ ಮಂಡಳಿ ರಚನೆಯಾಯಿತು. ಬಳಿಕ ಮಂಡಳಿ 18 ಸಭೆಗಳನ್ನು ನಡೆಸಿತು. ಎಲ್ಲ ರಾಜ್ಯಗಳ ಹಣಕಾಸು ಸಚಿವರು ಅಥವಾ ಪ್ರತಿನಿಧಿಗಳು, ಕೇಂದ್ರ ಮತ್ತು ರಾಜ್ಯಗಳ ಅಧಿಕಾರಿಗಳೊಂದಿಗೆ ಈ ಸಭೆಗಳಲ್ಲಿ ಭಾಗವಹಿಸಿ ಈ ಐತಿಹಾಸಿಕ ತೆರಿಗೆ ಸುಧಾರಣೆಯನ್ನು ಜಾರಿಗೊಳಿಸಲು ಕಾನೂನು ಮತ್ತು ಪದ್ಧತಿಯನ್ನು ರೂಪಿಸಿದರು. ಇದಕ್ಕಾಗಿ 27 ಸಾವಿರಕ್ಕೂ ಹೆಚ್ಚು ಮಾನವ ಗಂಟೆಗಳನ್ನು ವ್ಯಯಿಸಲಾಯಿತು. ಕೇಂದ್ರ ಮತ್ತು ರಾಜ್ಯಗಳ ಅಧಿಕಾರಿಗಳು ಅಧಿಕಾರಿಗಳು ದೇಶದ ವಿವಿಧೆಡೆ 200ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದರು.
ತೆರಿಗೆದಾರರು ಇನ್ನಷ್ಟು ಸುಗಮವಾಗಿ ವ್ಯಾಪಾರ ನಡೆಸುವಂತಹ ವಾತಾವರಣ ಸೃಷ್ಟಿಸುವುದು ಮುಖ್ಯ ಉದ್ದೇಶವಾದದ್ದರಿಂದ ಅದಕ್ಕನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾತ್ರ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಲಾಯಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಜಿಎಸ್ ಟಿ ಮಂಡಳಿ ಜಿಎಸ್ ಟಿ ಕಾನೂನುಗಳು, ನಿಯಮಗಳು ಹಾಗೂ ತೆರಿಗೆ ದರ ಸ್ವರೂಪಕ್ಕೆ ಅನುಮೋದನೆ ನೀಡಿತು. ಮಂಡಳಿಯ ಎಲ್ಲ ನಿರ್ಧಾರಗಳನ್ನು ಸಹಮತದಿಂದ ಕೈಗೊಳ್ಳಲಾಯಿತು. ಕಾನೂನುಗಳು ಹಾಗೂ ನಿಯಮಗಳನ್ನು ರೂಪಿಸುವಾಗ ಸಂಬಂಧಿಸಿದ ಎಲ್ಲ ವಲಯಗಳೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಲಾಯಿತು. ಕರಡು ಕಾನೂನುಗಳು ಹಾಗೂ ನಿಯಮಗಳನ್ನು ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ಸಾರ್ವಜನಿಕರ ಅಭಿಪ್ರಾಯವನ್ನೂ ಸಂಗ್ರಹಿಸಲಾಯಿತು.
2017ರ ಮಾರ್ಚ್ 29ರಂದು ಹಣಕಾಸು ಸಚಿವರು ನಾಲ್ಕು ಸರಕುಗಳು ಮತ್ತು ಸೇವೆಗಳ ತೆರಿಗೆ ಮಸೂದೆಗಳನ್ನು ಲೋಕಸಭೆಯಲ್ಲಿ ಅನುಮೋದನೆಗಾಗಿ ಮಂಡಿಸಿದರು. ಅವುಗಳೆಂದರೆ ಕೇಂದ್ರೀಯ ಸರಕುಗಳು ಮತ್ತು ಸೇವಾ ತೆರಿಗೆ ಮಸೂದೆ 2017, ಸಂಯೋಜಿತ ಜಿಎಸ್ ಟಿ ಮಸೂದೆ 2017, ಕೇಂದ್ರಾಡಳಿತ ಪ್ರದೇಶಗಳ ಜಿಎಸ್ ಟಿ ಮಸೂದೆ 2017 ಹಾಗೂ ರಾಜ್ಯಗಳಿಗೆ ಜಿಎಸ್ ಟಿ ಪರಿಹಾರ ಮಸೂದೆ 2017. ಈ ಮಸೂದೆಗಳಿಗೆ 2017ರ ಮಾರ್ಚ್ 29ರಂದು ಲೋಕಸಭೆಯ ಅಂಗೀಕಾರ ಹಾಗೂ 2017ರ ಏಪ್ರಿಲ್ 6ರಂದು ರಾಜ್ಯಸಭೆಯ ಅನುಮೋದನೆ ದೊರೆಯಿತು.
ಜಿಎಸ್ ಟಿ ಮಂಡಳಿ ಸರಕುಗಳು ಮತ್ತು ಸೇವಾ ತೆರಿಗೆಯ ಅಂತಿಮ ಸ್ವರೂಪವನ್ನು ಹೀಗೆ ನಿರ್ಧರಿಸಿತು:
- ಜಿಎಸ್ ಟಿ ವಿಧಿಸುವುದರಿಂದ ವಿನಾಯಿತಿ ನೀಡಲು ರಾಜ್ಯಗಳಿಗೆ ಆರಂಭಿಕ ಮಿತಿ 20 ಲಕ್ಷ ರೂ. ವಿಶೇಷ ವರ್ಗಗಳಲ್ಲಿ ಇದು 10 ಲಕ್ಷ ರೂ.
- ಜಿಎಸ್ ಟಿಗಾಗಿ ಶೇ.5, ಶೇ.12, ಶೇ.18 ಹಾಗೂ ಶೇ.28 – ಈ ನಾಲ್ಕು ತೆರಿಗೆ ದರ ಸ್ಲ್ಯಾಬ್ ಗಳ ಅಳವಡಿಕೆ.
- ಐಷಾರಾಮಿ ಕಾರುಗಳು, ತಂಪುಪಾನೀಯಗಳು, ಪಾನ್ ಮಸಾಲ ಹಾಗೂ ತಂಬಾಕು ಉತ್ಪನ್ನಗಳು ಮುಂತಾದ ಕೆಲ ಸರಕುಗಳ ಮೇಲೆ ಶೇ.28ರ ಜಿಎಸ್ ಟಿಗೆ ಮಿಗಿಲಾಗಿ ಸೆಸ್ ವಿಧಿಸಲಾಗುವುದು. ಇದನ್ನು ರಾಜ್ಯಗಳಿಗೆ ಪರಿಹಾರ ನೀಡಲು ಬಳಸಲಾಗುವುದು.
- ಸಂಯೋಜಿತ ಸ್ಕೀಮ್ ಪಡೆಯಲು ಆರಂಭಿಕ ಮಿತಿ 75 ಲಕ್ಷ ರೂ. ಆದರೆ ವಿಶೇಷ ದರ್ಜೆಯ ರಾಜ್ಯಗಳಿಗೆ ಈ ಮಿತಿ 50 ಲಕ್ಷ ರೂ. ಈ ರಾಜ್ಯಗಳು ತ್ರೈಮಾಸಿಕ ರಿಟರ್ನ್ಸ್ ಮಾತ್ರ ಸಲ್ಲಿಸಿದರೆ ಸಾಕು. ಕೆಲವು ವರ್ಗಗಳ ತಯಾರಿಕರು, ಸೇವಾದಾರರು (ರೆಸ್ಟೋರೆಂಟ್ ಗಳನ್ನು ಹೊರತುಪಡಿಸಿ) ಸಂಯೋಜಿತ ಸ್ಕೀಮ್ ನ ವ್ಯಾಪ್ತಿಗೆ ಒಳಪಡುವುದಿಲ್ಲ.
ಜಿಎಸ್ ಟಿಯ ಇತರ ಪ್ರಮುಖ ಅಂಶಗಳು
- ಜಿಎಸ್ ಟಿ ಅಡಿ ಎಲ್ಲ ವ್ಯವಹಾರಗಳು ಹಾಗೂ ಪ್ರಕ್ರಿಯೆಗಳು ವಿದ್ಯುನ್ಮಾನ ವಿಧಾನದಲ್ಲಿ ನಡೆಯುತ್ತವೆ. ಇದರಿಂದ ತೆರಿಗೆದಾರರು ತೆರಿಗೆ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಮೇಯ ಸಾಕಷ್ಟು ತಗ್ಗಲಿದೆ.
- ಜಿಎಸ್ ಟಿಯಿಂದ ಸ್ವಯಂಚಾಲಿತವಾಗಿ ಮಾಸಿಕ ರಿಟರ್ನ್ಸ್ ಮತ್ತು ವಾರ್ಷಿಕ ರಿಟರ್ನ್ ಸಿದ್ಧಪಡಿಸುವ ಸೌಲಭ್ಯ ಲಭ್ಯವಾಗಲಿದೆ.
ಜಿಎಸ್ ಟಿ ಜಾಲದ ಪಾತ್ರ: ಜಿಎಸ್ ಟಿ ಎನ್ ಒಂದು ಖಾಸಗಿ ಕಂಪೆನಿಯ ರೂಪದಲ್ಲಿ ರಚನೆಯಾಗಿದ್ದರೂ ಸರ್ಕಾರದ ನಿಯಂತ್ರಣ ಇರಲಿದೆ. ಇದು ತೆರಿಗೆದಾರರಿಗೆ ನೆರವಾಗುವ ಪೋರ್ಟಲ್. ಸಾಮಾನ್ಯ ಪೋರ್ಟಲ್ ನಲ್ಲಿ ತೆರಿಗೆದಾರರು ತಮ್ಮ ನೋಂದಣಿ ಅರ್ಜಿಗಳು ಹಾಗೂ ರಿಟರ್ನ್ಸ್ ಸಲ್ಲಿಸಬಹುದು; ತೆರಿಗೆಗಳನ್ನು ಪಾವತಿಸಬಹುದು ಹಾಗೂ ಮರುಪಾವತಿಗೆ ಕೋರಬಹುದು.
ಇದೊಂದು ಆಧುನಿಕ ಐಟಿ ಮಾಧ್ಯಮವಾಗಿದ್ದು ಸುಮಾರು 80 ಲಕ್ಷ ತೆರಿಗೆದಾರರು ಹಾಗೂ ಸಾವಿರಾರು ತೆರಿಗೆ ಅಧಿಕಾರಿಗಳಿಗೆ ಸಂಪರ್ಕ ಸಾಧನವಾಗಲಿದೆ. ಜಿಎಸ್ ಟಿ ಅಡಿ ಎಲ್ಲ ಫೈಲಿಂಗ್ ಗಳು ವಿದ್ಯುನ್ಮಾನ ಮಾಧ್ಯಮದಲ್ಲೇ ನಡೆಯುತ್ತವೆ. ಕಳೆದ ಫೆಬ್ರವರಿಯಿಂದ ಈವರೆಗೆ ಸುಮಾರು 64 ಸಾವಿರ ಮಂದಿ ಅಧಿಕಾರಿಗಳಿಗೆ ಜಿಎಸ್ ಟಿ ಪೋರ್ಟಲ್ ಬಗ್ಗೆ ತರಬೇತಿ ನೀಡಲಾಗಿದೆ. ಈಗಿರುವ ತೆರಿಗೆದಾರರು ಜಿಎಸ್ ಟಿ ವ್ಯವಸ್ಥೆಯಡಿ ನೋಂದಣಿ ಮಾಡಿಸಿಕೊಳ್ಳಲು 2016ರ ನವೆಂಬರ್ 8ರಿಂದ ಅವಕಾಶ ಕಲ್ಪಿಸಲಾಗಿದ್ದು, ಈವರೆಗೆ 66 ಲಕ್ಷಕ್ಕೂ ಹೆಚ್ಚು ತೆರಿಗೆದಾರರು ಜಿಎಸ್ ಟಿ ಪೋರ್ಟಲ್ ನಲ್ಲಿ ತಮ್ಮ ಖಾತೆಗಳಿಗೆ ಚಾಲನೆ ನೀಡಿದ್ದಾರೆ. 25 ಬ್ಯಾಂಕುಗಳು ಜಿಎಸ್ ಟಿ ಪೋರ್ಟಲ್ ಜತೆ ಸಂಯೋಜಿಸಲ್ಪಟ್ಟಿವೆ.
ಜಿಎಸ್ ಟಿ ಕುರಿತು ಜಾಗೃತಿ: ಸರ್ಕಾರ ವಿವಿಧ ಕಾರ್ಯಕ್ರಮಗಳು ಹಾಗೂ ಮಾಧ್ಯಮಗಳ ಮೂಲಕ ಜಿಎಸ್ ಟಿ ಕುರಿತು ಜಾಗೃತಿ ಮೂಡಿಸಿದೆ. ಕೇಂದ್ರೀಯ ಅಬಕಾರಿ ಮತ್ತು ಸುಂಕ ಮಂಡಳಿಯ ಕ್ಷೇತ್ರ ಘಟಕಗಳು ಮೊಬೈಲ್ ವ್ಯಾನ್ ಗಳ ಮೂಲಕ ಮಾಹಿತಿ ಆಂದೋಲನ ಹಮ್ಮಿಕೊಂಡಿದ್ದು, ದೇಶಾದ್ಯಂತ 4,700 ಕಾರ್ಯಾಗಾರಗಳನ್ನು ಆಯೋಜಿಸಿವೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಹಾಗೂ ಜಾಹೀರಾತು ಫಲಕಗಳ ಮೂಲಕ ವ್ಯಾಪಕ ಬಹುಮಾಧ್ಯಮ ಮಾಹಿತಿ ಆಂದೋಲನ ಕೂಡ ನಡೆಸಲಾಗಿದೆ.
ಸಿಬಿಇಸಿಯ ಪುನರ್ ಸಂಘಟನೆ: ಜಿಎಸ್ ಟಿ ನಿರ್ವಹಣೆಗಾಗಿ ಕೇಂದ್ರೀಯ ಅಬಕಾರಿ ಮತ್ತು ಸುಂಕ ಮಂಡಳಿ – ಸಿಬಿಇಸಿಯ ಪುನರ್ ಸಂಘಟನೆಯ ಅಗತ್ಯ ಕಂಡುಬಂತು. ಅದರಂತೆ ಕ್ಷೇತ್ರಮಟ್ಟದ ಕಚೇರಿಗಳನ್ನು 21 ಸಿಜಿಎಸ್ ಟಿ ಮತ್ತು ಸಿಎಕ್ಸ್ ವಲಯಗಳು, 107 ಸಿಜಿಎಸ್ ಟಿ ಮತ್ತು ಸಿಎಕ್ಸ್ ಕಮಿಶನರೇಟ್ ಗಳು, 768 ಸಿಜಿಎಸ್ ಟಿ ಮತ್ತು ಸಿಎಕ್ಸ್ ವಿಭಾಗಗಳು, 3969 ಸಿಜಿಎಸ್ ಟಿ ಮತ್ತು ಸಿಎಕ್ಸ್ ರೇಂಜ್ ಗಳು , 48 ಲೆಕ್ಕಪರಿಶೋಧನಾ ಕಮಿಶನರೇಟ್ ಗಳು ಮತ್ತು 49 ಅಪೀಲು ಕಮಿಶನರೇಟ್ ಗಳೆಂದು ಪುನರ್ ಸಂಘಟಿಸಲಾಗಿದೆ.
ತರಬೇತಿ: ಜಿಎಸ್ ಟಿ ಜಾರಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸುಂಕ ಪರೋಕ್ಷ ತೆರಿಗೆ ಮತ್ತು ನಾರ್ಕೊಟಿಕ್ಸ್ ಅಕಾಡೆಮಿ (ಎನ್ ಎ ಸಿ ಐ ಎನ್) ವತಿಯಿಂದ ವ್ಯಾಪಕ ತರಬೇತಿ ನೀಡಲಾಗಿದೆ. ಮೊದಲ ಹಂತದಲ್ಲಿ ಸುಮಾರು 52 ಸಾವಿರ ಅಧಿಕಾರಿಗಳು ತರಬೇತಿ ಪಡೆದಿದ್ದು, ಬಳಿಕ 17,213 ಅಧಿಕಾರಿಗಳಿಗೆ ಪುನರ್ಮನನ ತರಬೇತಿ ನೀಡಲಾಗಿದೆ. 20 ಸಂಸ್ಥೆಗಳನ್ನು ಅನುಮೋದಿತ ತರಬೇತಿ ಭಾಗೀದಾರರೆಂದು ಪರಿಗಣಿಸಲಾಗಿದ್ದು ಈವರೆಗೆ 2,565 ಮಂದಿ ತರಬೇತಿ ಪಡೆದಿದ್ದಾರೆ. ಎನ್ ಎ ಸಿ ಐ ಎನ್ 92 ಸಚಿವಾಲಯಗಳು ಹಾಗೂ ಸಾರ್ವಜನಿಕ ವಲಯದ ಉದ್ದಿಮೆಗಳ 2,611 ಮಂದಿ ಅಧಿಕಾರಿಗಳಿಗೆ ಕೂಡ ತರಬೇತಿ ನೀಡಿದೆ.
ಜಿಎಸ್ ಟಿ ಕುರಿತು ಇಂಗ್ಲಿಷ್, ಹಿಂದಿ ಹಾಗೂ 10 ಪ್ರಾದೇಶಿಕ ಭಾಷೆಗಳಲ್ಲಿ 500 ಪ್ರಶ್ನೋತ್ತರಗಳನ್ನೂ (ಎಫ್ ಎ ಕ್ಯೂ) ವಿತರಿಸಲಾಗಿದೆ. ಮಾತ್ರವಲ್ಲ ಅನೇಕ ಮಾಹಿತಿ ಸಾಮಗ್ರಿಗಳು, ಪಿಪಿಟಿಗಳು, ಕಲಿಕಾ ವೀಡಿಯೋಗಳನ್ನೂ ಒದಗಿಸಲಾಗಿದೆ.
ಸಾಮಾಜಿಕ ಮಾಧ್ಯಮ ಬಳಕೆ: ತೆರಿಗೆದಾರರಿಗೆ ತಕ್ಷಣವೇ ಮಾಹಿತಿ ನೀಡಲು ಟ್ವಿಟರ್ ಸೇವೆ ಆರಂಭಿಸಲಾಗಿದೆ. AskGST_GOI ಟ್ವಿಟರ್ ಖಾತೆಯ ಮೂಲಕ ಪ್ರತಿದಿನ ಸಾವಿರಾರು ಮಂದಿ ತೆರಿಗೆಗಾರರು ತಮ್ಮ ಸಂದೇಹ ಬಗೆಹರಿಸಿಕೊಳ್ಳುತ್ತಿದ್ದಾರೆ.







