ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಲೋಕಾಯುಕ್ತ ತಂಡದಿಂದ ದಾಳಿ
.jpg)
ಉಪ್ಪಿನಂಗಡಿ, ಜು.1: ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಕಲ್ಲಿನ ಕೋರೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತ ಜಸ್ಟೀಸ್ ಸುಭಾಶ್ ಬಿ. ಅಡಿ ನೇತೃತ್ವದ ಲೋಕಾಯುಕ್ತ ತಂಡವು ಶನಿವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಈ ಸಂದರ್ಭ ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ಗಣಿ ಮತ್ತು ಕಂದಾಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮೊಗ್ರು ಗ್ರಾಮದ ಸರ್ವೇ ನಂಬರ್ 72ರ ಇಂದುಮೊಗ್ರು ಹಾಗೂ ಕಡ್ತಿಲ ಎಂಬಲ್ಲಿ ಯೋಗೀಶ್ ಪೂಜಾರಿ ಹಾಗೂ ಪ್ರಸಾದ್ ಕಡ್ತಿಲ ಎಂಬವರು ಸರಕಾರಿ ಜಾಗದಲ್ಲಿ ಹಾಗೂ ಪರವಾನಿಗೆ ಇಲ್ಲದೆ ಕಲ್ಲು ಗಣಿಗಾರಿಕೆ ಹಾಗೂ ಕ್ರಶರ್ ನಡೆಸುತ್ತಿರುವ ಬಗ್ಗೆ ನ್ಯಾಯವಾದಿ ಕೇಶವ ಭಟ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಈ ಸಂದರ್ಭ ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಜಗದೀಶ್, ಇನ್ಸ್‌ಪೆಕ್ಟರ್ ವಿಜಯಪ್ರಸಾದ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ದ.ಕ. ಜಿಲ್ಲಾ ಜಂಟಿ ನಿರ್ದೇಶಕಿ ಸುಮಿತ್ರಾ, ಸಹಾಯಕ ನಿರ್ದೇಶಕಿ ಪದ್ಮಶ್ರೀ, ಪುತ್ತೂರು ತಹಶೀಲ್ದಾರ್ ಅನಂತ ಶಂಕರ್, ಪುತ್ತೂರು ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಅನಿಲ್ ಕುಲಕರ್ಣಿ, ಕೊಕ್ಕಡ ಕಂದಾಯ ಹೋಬಳಿಯ ಕಂದಾಯ ನಿರೀಕ್ಷಕ ಪ್ರತೀಶ್, ಮೊಗ್ರು ಗ್ರಾಮಕರಣಿಕ ರಫೀಕ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.





