ದೇಶದಲ್ಲಿ ಪ್ರಪ್ರಥಮ ಮತ ಚಲಾಯಿಸಿದ ವ್ಯಕ್ತಿಗೆ ಶತ ವರ್ಷದ ಸಂಭ್ರಮ

ಶಿಮ್ಲ, ಜು.1: ಸ್ವತಂತ್ರ ಭಾರತದಲ್ಲಿ ನಡೆದ ಚೊಚ್ಚಲು ಚುನಾವಣೆಯಲ್ಲಿ ಪ್ರಪ್ರಥಮ ಮತ ಚಲಾಯಿಸಿದ ಹೆಗ್ಗಳಿಕೆ ಹೊಂದಿರುವ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಚಿನಿ ಎಂಬ ಗ್ರಾಮದ ನಿವಾಸಿ ಶ್ಯಾಮ್‌ಶರಣ್ ನೇಗಿ ಜುಲೈ 1ರಂದು 100 ವರ್ಷ ಪೂರೈಸಿದ್ದು ಇವರನ್ನು ಸನ್ಮಾನಿಸಲು ಜಿಲ್ಲಾಡಳಿತ ಸಜ್ಜಾಗಿದೆ. 1951ರ ಅಕ್ಟೋಬರ್‌ನಲ್ಲಿ ನಡೆದ ದೇಶದ ಪ್ರಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದ ಪ್ರಪ್ರಥಮ ವ್ಯಕ್ತಿಯಾಗಿದ್ದಾರೆ ನೇಗಿ. ಈ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸುವ ಕಾರಣ, ಚಿನಿಯಲ್ಲಿ ದೇಶದ ಇತರೆಡೆಗಿಂತ ಮೊದಲೇ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
2014ರಲ್ಲಿ , ಲೋಕಸಭಾ ಚುನಾವಣೆಗೂ ಮುನ್ನ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ‘ರಾಯಭಾರಿ’ಯಾಗಿ ನೇಗಿಯನ್ನು ನೇಮಿಸುವ ಮೂಲಕ ಹಿಮಾಚಲ ಪ್ರದೇಶ ರಾಜ್ಯ ಚುನಾವಣಾ ಆಯೋಗ ಅವರನ್ನು ಗೌರವಿಸಿತ್ತು. ಇದೀಗ ಭಾರತದ ಮುಖ್ಯ ಚುನಾವಣಾಧಿಕಾರಿ ನವೀನ್ ಚಾವ್ಲ ಕಿನ್ನೋರ್‌ಗೆ ತೆರಳಿ ನೇಗಿಯವರನ್ನು ಗೌರವಿಸಲಿದ್ದಾರೆ.
ಪ್ರಪ್ರಥಮ ಮತ ಚಲಾಯಿಸಿದ ದಿನ ನನಗಿಂದೂ ನೆನಪಿದೆ. ಈಗ ದೇಶದಲ್ಲಿ ಹಲವಾರು ಬದಲಾವಣೆಯಾಗಿದೆ . ಪ್ರತಿಯೊಬ್ಬರೂ ಮತ ಚಲಾಯಿಸುವ ಮೂಲಕ ಭವಿಷ್ಯವನ್ನು ನಿರ್ಧರಿಸುವ ಕಾರ್ಯಕ್ಕೆ ಮುನ್ನುಡಿ ಬರೆಯಬೇಕು ಎನ್ನುತ್ತಾರೆ ಶ್ಯಾಮ್‌ಸರಣ್ ನೇಗಿ. 1917ರ ಜುಲೈ 1ರಂದು ಜನಿಸಿದ ಇವರು 16 ಬಾರಿ ಲೋಕಸಭಾ ಚುನಾವಣೆಯಲ್ಲಿ ಹಾಗೂ 12 ಬಾರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗದ ವರದಿ ತಿಳಿಸಿದೆ. ನೇಗಿಯವರ ಮನೆಯಲ್ಲಿ ಶತ ವರ್ಷದ ಸಂಭ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಇವರ 96ರ ಹರೆಯದ ಪತ್ನಿ ಕೂಡಾ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.







