‘ಹಸ್ನತ್ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ’
ಬೆಂಗಳೂರು, ಜು.1: ಹಸ್ನತ್ ಮಹಿಳಾ ಕಾಲೇಜಿಗೆ ವಿದ್ಯಾರ್ಥಿನಿಯರ ಪ್ರವೇಶಕ್ಕೆ ಪ್ರೋತ್ಸಾಹ ನೀಡಲು ಇನ್ನೆರಡು ತಿಂಗಳಲ್ಲಿ ಬಸ್ ಸೌಲಭ್ಯವನ್ನು ಕಲ್ಪಿಸುವುದಾಗಿ ಹಸ್ನತ್ ಎಜುಕೇಷನ್ ಸೊಸೈಟಿಯ ನೂತನ ಅಧ್ಯಕ್ಷ ಯೂನುಸ್ ಮುಹಮ್ಮದ್ ತಿಳಿಸಿದ್ದಾರೆ.
ಶನಿವಾರ ನಗರದ ಡಿಕನ್ಸನ್ ರಸ್ತೆಯಲ್ಲಿರುವ ಹಸ್ನತ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಈದ್ ಮಿಲನ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 1971ರಲ್ಲಿ ಆರಂಭವಾದ ಈ ಕಾಲೇಜು 46 ವಸಂತಗಳನ್ನು ಪೂರೈಸಿದೆ ಎಂದರು.
ಕಳೆದ ಹಲವಾರು ವರ್ಷಗಳಿಂದ ಹಸ್ನತ್ ಕಾಲೇಜು ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. 2016ರಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ ಪದವಿ ಪರೀಕ್ಷೆಯ ಪ್ರಥಮ ಐದು ರ್ಯಾಂಕುಗಳನ್ನು ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಈ ಕಾಲೇಜಿಗೆ ಸಾರಿಗೆ ಸಂಪರ್ಕದ ಸಮಸ್ಯೆಯಿರುವುದು ನನ್ನ ಗಮನಕ್ಕೆ ಬಂದಿದೆ. ಆದುದರಿಂದ, ಮೊಟ್ಟ ಮೊದಲಿಗೆ ಶಿವಾಜಿನಗರದಿಂದ ಕಾಲೇಜುವರೆಗೆ ವಿದ್ಯಾರ್ಥಿನಿ ಯರನ್ನು ಕರೆತರಲು ಬಸ್ ಸೌಲಭ್ಯ ಕಲ್ಪಿಸಲಾಗುವುದು. ನಂತರ ಹಂತ ಹಂತವಾಗಿ ಇನ್ನಿತರ ಪ್ರದೇಶಗಳಿಗೂ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ಯೂನುಸ್ ಮುಹಮ್ಮದ್ ತಿಳಿಸಿದರು.
ಪಿಯುಸಿಯಲ್ಲಿ 600 ವಿದ್ಯಾರ್ಥಿನಿಯರನ್ನು ದಾಖಲಿಸಿಕೊಳ್ಳಲು ಅವಕಾಶವಿದೆ. ಆದರೆ, ಈಗ ಕೇವಲ 250 ವಿದ್ಯಾರ್ಥಿನಿಯರಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ತರಗತಿಗೆ 50 ವಿದ್ಯಾರ್ಥಿನಿಯರ ಪ್ರವೇಶಕ್ಕೆ ಅವಕಾಶವಿದೆ. ಆದರೆ, ಈಗ ಲಭ್ಯವಿರುವುದು ಕೇವಲ 27 ಮಂದಿ ಮಾತ್ರ ಎಂದು ಅವರು ಹೇಳಿದರು.
ಶೈಕ್ಷಣಿಕವಾಗಿ ಹಸ್ನತ್ ಕಾಲೇಜು ಮೈಲಿಗಲ್ಲು ಸಾಧಿಸುತ್ತಿದೆ. ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿರುವುದು ನಿಜ. ಹಂತ ಹಂತವಾಗಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ವಿದ್ಯಾರ್ಥಿನಿಯರ ಈ ಸಾಧನೆಗೆ ಶ್ರಮಿಸುತ್ತಿರುವ ಬೋಧಕ ವರ್ಗದವರಿಗೂ ಇದೇ ಸಂದರ್ಭದಲ್ಲಿ ಯೂನುಸ್ ಮುಹಮ್ಮದ್ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಹಸ್ನತ್ ಎಜುಕೇಷನ್ ಸೊಸೈಟಿಯ ಮಾಜಿ ಅಧ್ಯಕ್ಷ ಎ.ಹಮೀದ್ ರಝಾಕ್ ಸೇಠ್, ಕಾರ್ಯದರ್ಶಿ ಎ.ವಹಾಬ್‌ಖಾನ್, ಉಪಾಧ್ಯಕ್ಷ ಸಯೀದ್‌ಮುನವ್ವರ್, ಪ್ರಾಂಶುಪಾಲ ಡಾ.ಮುಹಮ್ಮದ್ ಸುಹೇಲ್ ಇಕ್ಬಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







