ಮುಸ್ಲಿಮರ ಮೇಲೆ ಹಂದಿ ಮಾಂಸ ಎಸೆದಾತನಿಗೆ 6 ತಿಂಗಳು ಜೈಲು

ಲಂಡನ್, ಜು. 1: ಉತ್ತರ ಲಂಡನ್‌ನ ರಸ್ತೆಯೊಂದರಲ್ಲಿ ಓರ್ವ ಮಹಿಳೆ ಮತ್ತು ಅವರ ಹದಿಹರೆಯದ ಮಗಳ ಮೇಲೆ ಹಂದಿ ಮಾಂಸ ಎಸೆದ ಆರೋಪದಲ್ಲಿ 36 ವರ್ಷದ ಯುವಕನೊಬ್ಬನಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಅಲೆಕ್ಸ್ ಚಿವರ್ಸ್ ಈ ಮಹಿಳೆಯರನ್ನು ನೋಡಿ ನಿಂದಿಸಿದನು ಹಾಗೂ ‘ಐಸಿಸ್ ಮಂದಿ’ ಎಂಬುದಾಗಿ ಕಿರುಚಿದನು. ಹಾಗೂ ಬಳಿಕ, ಹದಿಹರೆಯದ ಯುವತಿಯ ಕೆನ್ನೆಗೆ ಹಂದಿಯ ಮಾಂಸವನ್ನೊಳಗೊಂಡ ತೆರೆದ ಪ್ಯಾಕೆಟ್‌ನಿಂದ ಬಡಿದನು.
ಧಾರ್ಮಿಕ ದೃಷ್ಟಿಯಲ್ಲಿ, ಹಂದಿ ಮಾಂಸವು ಮುಸ್ಲಿಮರಿಗೆ ಅಪವಿತ್ರವಾಗಿದೆ.ಈ ಘಟನೆಯು ಯುವತಿಯು ಜೂನ್ 8ರಂದು ತಾಯಿ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಡೆದಿದೆ.
‘‘ಈ ಘಟನೆಯಲ್ಲಿ ಯುವತಿಗೆ ಗಾಯವಾಗಿಲ್ಲವಾದರೂ, ಮಾನಸಿಕವಾಗಿ ಆಘಾತಗೊಂಡಿದ್ದಾರೆ’’ ಎಂದು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದರು.ದಾಳಿಕೋರನು ದಾಳಿಯ ವೇಳೆ ಸ್ಕಿ ಮುಖವಾಡ ಮತ್ತು ಹೆಲ್ಮೆಟ್ ಧರಿಸಿದ್ದನು. ಆದರೆ, ಮೆಟ್ರೊಪಾಲಿಟನ್ ಪೊಲೀಸರು ಸಿಸಿಟಿವ ದೃಶ್ಯಗಳನ್ನು ಪರಿಶೀಲಿಸಿ ಘಟನೆ ನಡೆದ ಆರು ದಿನಗಳ ಬಳಿಕ ಆರೋಪಿಯನ್ನು ಹಿಡಿದಿದ್ದಾರೆ.
ಹೈಬರಿ ಕಾರ್ನರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಆತ ಒಪ್ಪಿಕೊಂಡ ಬಳಿಕ, ನ್ಯಾಯಾಲಯವು ಆತನಿಗೆ 26 ವಾರಗಳ ಶಿಕ್ಷೆಯನ್ನು ವಿಧಿಸಿದೆ. ಜೊತೆಗೆ 115 ಪೌಂಡ್ ದಂಡವನ್ನೂ ವಿಧಿಸಿದೆ.







