ಉಳ್ಳಾಲ: ಕಡಲ್ಕೊರೆತ ಸಂತ್ರಸ್ತರಿಂದ ನಗರಸಭೆ ಮುಂಭಾಗ ಪ್ರತಿಭಟನೆ
ಬೇಡಿಕೆ ಈಡೇರಿಸಲು ಮನವಿ

ಉಳ್ಳಾಲ, ಜು.1: ಉಳ್ಳಾಲದ ಕೈಕೋ ಮತ್ತು ಕಿಲೆರಿಯಾ ನಗರದಲ್ಲಿ ಕಳೆದ ಒಂದು ತಿಂಗಳಿಂದ ನಿರಂತರ ಕಡಲ್ಕೊರೆತ ಸಮಸ್ಯೆಯು ಉಲ್ಬಣಿಸಿದ್ದು, ಈ ನಿಟ್ಟಿನಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕಡಲ್ಕೊರೆತ ಸಂತ್ರಸ್ತರು ಉಳ್ಳಾಲ ನಗರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕೈಕೋ ಮತ್ತು ಕಿಲೇರಿಯಾ ನಗರದ ನಾಗರಿಕ ಹಿತರಕ್ಷಣಾ ವೇದಿಕೆಯ ಮುಂದಾಳುತ್ವದಲ್ಲಿ ಕಡಲ್ಕೊರೆತ ಸಂತ್ರಸ್ತರು ಶನಿವಾರದಂದು ಬೆಳಿಗ್ಗೆ ಉಳ್ಳಾಲ ನಗರಸಭಾ ಆಡಳಿತ ಸೌಧದ ಎದುರಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.
ಮುಖಂಡರಾದ ಹ್ಯಾರಿಸ್ ಮಲಾರ್ ಮಾತನಾಡಿ, ಸರಕಾರವು ಕಡಲ್ಕೊರೆತ ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ನಗರಸಭೆ ವ್ಯಾಪ್ತಿಯಲ್ಲಿನ ಸರಕಾರಿ ಜಮೀನನ್ನು ಗುರುತಿಸಿ ಮನೆ ಕಳಕೊಂಡವರಿಗೆ ನಿವೇಶನ ನೀಡಬೇಕು, ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೋಡೆ ನಿರ್ಮಿಸಬೇಕು, ಕೈಕೋ,ಕಿಲೇರಿಯಾ ನಗರದಲ್ಲಿ ಅಂಗನವಾಡಿಗಳನ್ನು ಸ್ಥಾಪಿಸಬೇಕು, ಕಡಲ್ಕೊರೆತ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೀಟ ನಾಶಕಗಳನ್ನು ಸಿಂಪಡಿಸಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟರು.
ಉಳ್ಳಾಲ ನಗರಸಭಾಧ್ಯಕ್ಷ ಹುಸೇನ್ ಕುಂಞಮೋನುರಲ್ಲಿ ಪ್ರತಿಭಟನಾಕಾರರು ಪ್ರಮುಖ ಬೇಡಿಕೆಗಳ ಮನವಿ ಪತ್ರ ನೀಡಿ ಹತ್ತು ದಿವಸಗಳೊಳಗೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯರಾದ ಮುಕ್ಕಚ್ಚೇರಿಯ ಖಲೀಲ್, ಎಸ್‌ಡಿಪಿಐಯ ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರದಾನ ಕಾರ್ಯದರ್ಶಿ ಹಾರಿಸ್ ಮಲಾರ್, ಕೈಕೋ ರಿಫಾಯಿ ಮಸ್ಜಿದ್‌ನ ಅಧ್ಯಕ್ಷ ತೌಫಿಕ್, ಬಶೀರ್, ಅಶ್ರಫ್, ಸಲಾಂ, ಫಯಾಝ್, ಬಾವ ಕೈಕೋ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







