ಅಚ್ಛೇದಿನ್ ಎಲ್ಲಿ ಬಂತು? : ಮೋದಿ ವಿರುದ್ಧ ಸಿಎಂ ವಾಗ್ದಾಳಿ

ತುಮಕೂರು/ಮಧುಗಿರಿ,ಜು.1: ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುಂಚೆ ಸಾಕಷ್ಟು ಭರವಸೆಗಳನ್ನು ನೀಡಿದ್ದರು, ಆದರೆ ಇದುವರೆಗೆ ಯಾವುದೇ ಭರವಸೆಯನ್ನು ಈಡೇರಿಸಿಲ್ಲ, ಅಚ್ಛೇದಿನ್ ಆಯೇಗಾ, ಅಚ್ಛೇದಿನ್ ಆಯೇಗಾ ಎಂದು ಹೇಳುತ್ತಿದ್ದರು, ಅಚ್ಛೇದಿನ್ ಎಲ್ಲಿ ಬಂದಿದೆ ಎಂದು ಜನರನ್ನು ಪ್ರಶ್ನಿಸಿದರು.
ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು, ಮೋದಿ ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಚುನಾವಣಾ ಭರವಸೆಯಲ್ಲಿ ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು, ಆದರೆ ಇದುವರೆಗೂ 4ಲಕ್ಷ ಉದ್ಯೋಗವನ್ನು ಸೃಷ್ಟಿಸಿದ್ದಾರೆ. ಅಧಿಕಾರಕ್ಕೆ ಬಂದ ನೂರೇ ದಿನದಲ್ಲಿ ವಿದೇಶದಲ್ಲಿನ ಕಪ್ಪುಹಣ ಭಾರತಕ್ಕೆ ತರುತ್ತೇನೆ, 15 ರೂಪಾಯಿ ತಂದ್ರಾ? ಮೋದಿ ಬಾಯಿ ಬಡಾಯಿ, ಸಾಧನೆ ಶೂನ್ಯ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ 2013ರಲ್ಲಿ ನೀಡಿದ್ದ ಚುನಾವಣಾ ಭರವಸೆಗಳಲ್ಲಿ ಶೇಕಡಾ 95ರಷ್ಟು ಭರವಸೆಯನ್ನು ಈಡೇರಿಸಿದ್ದೇವೆ, ಇದು ನಮಗೆ ಹೆಮ್ಮೆ ವಿಚಾರವಾಗಿದೆ, ನುಡಿದ್ದಂತೆ ನಡೆಯುತ್ತಿದ್ದೇವೆ, ಬಿಜೆಪಿಯಂತೆ ಯೂಟರ್ನ್ ರಾಜಕಾರಣವನ್ನು ಮಾಡುವುದಿಲ್ಲ, ಜಿಎಸ್‍ಟಿ, ಆಧಾರ್, ನರೇಗಾ ವಿರೋಧಿಸಿದ್ದ ಬಿಜೆಪಿಯವರು ಇಂದು ಅದೇ ಯೋಜನೆಗಳನ್ನು ಅಪ್ಪಿಕೊಳ್ಳುತ್ತಿದ್ದಾರೆ, ಒಪ್ಪಿಕೊಳ್ಳುತ್ತಿದ್ದಾರೆ, ಜಿಎಸ್‍ಟಿ ಯೋಜನೆ ಯುಪಿಎ ಸರ್ಕಾರದ ಕೂಸು, ಅದನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂದರು.
ಜನವಿರೋಧ ಇಲ್ಲದ ಸರ್ಕಾರ ದೇಶದಲ್ಲಿ ನಮ್ಮದು ಮಾತ್ರ, ಸಾಲಮನ್ನಾಕ್ಕೆ ರೈತರು ದೇಶದ ವಿವಿಧೆಡೆ ಹೋರಾಟ ಪ್ರಾರಂಭಿಸಿದರು, ಮಧ್ಯಪ್ರದೇಶದಲ್ಲಿ ರೈತರನ್ನು ಗುಂಡಿಕ್ಕಿ ಕೊಂದರು, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಸಾಲಮನ್ನಾ ಮಾಡಿದ ಆದೇಶ ಹೊರಬಂದಿಲ್ಲ, ರೈತರು ಹೋರಾಟ ಮಾಡುವ ಮುಂಚೆಯೇ ಸಾಲಮನ್ನಾ ಮಾಡಿದ್ದೇನೆ, 6 ವರ್ಷದಿಂದ ಬರಗಾಲದಲ್ಲಿರುವ ಕರ್ನಾಟಕದಲ್ಲಿ ರೈತರ ಸಾಲವನ್ನು ಮಾಡುವಂತೆ ಪ್ರಧಾನಿಗೆ ಬಿಜೆಪಿ ನಾಯಕರೊಂದಿಗೆ ತೆರಳಿ ಮನವಿ ಮಾಡಿದೆವು, ನೋಡುತ್ತೇವೆ ಎಂದರೆ ಹೊರತು ಏನು ಮಾಡಲಿಲ್ಲ, ಬಿಜೆಪಿ ನಾಯಕರು ಒತ್ತಡ ಹಾಕಲಿಲ್ಲ ಎಂದರು
ಇತಿಹಾಸದಲ್ಲಿಯೇ ಯಾರು ಮಾಡದಷ್ಟು ಸಾಲವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ, ಸಾಲ ಮನ್ನಾ ಮಾಡುವಂತೆ ಕೊರಳಪಟ್ಟಿ ಹಿಡಿಯುತ್ತೇನೆ ಎಂದಿದ್ದ ಬಿಜೆಪಿ ಮುಖಂಡರು ಮೋದಿ ಅವರಿಗೆ ಕೈಮುಗಿದು ರಾಷ್ಟ್ರೀಯ ಬ್ಯಾಂಕ್‍ಗಳ ಸಾಲವನ್ನು ಮನ್ನಾ ಮಾಡಿಸಲಿ, ಬಿಎಸ್‍ವೈ ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾ ಮಾಡಲು ಆಗುವುದಿಲ್ಲ, ಕೇಂದ್ರ ಸರಕಾರ ನೋಟು ಮುದ್ರಿಸುವ ಅವಕಾಶ ನೀಡಿಲ್ಲ ಎಂದಿದ್ದರು, ಅಂತಹವರು ಈಗ ಸಾಲಮನ್ನಾ ಮಾಡುವಂತೆ ಹೇಳುತ್ತಾರೆ, ಇಂತಹ ಎರಡು ನಾಲಿಗೆಯ ನಾಯಕರನ್ನು ಜನರು ನಂಬಬಾರದು ಎಂದು ಹೇಳಿದರು.
ಮಧುಗಿರಿ ಅಭಿವೃದ್ಧಿಗೆ ಶಾಸಕ ಕೆ.ಎನ್.ರಾಜಣ್ಣ ಕಾರಣ, ಕ್ರಿಯಾಶೀಲ ಶಾಸಕ, ಬಡವರ ಬಗ್ಗೆ ಚಿಂತಿಸುವ ರಾಜಕಾರಣಿ, ರಾಜಕಾರಣಿ ಜನಪರ ಕಾಳಜಿ ಹೊಂದಿರಬೇಕು, ಕಾಳಜಿಯುಳ್ಳ ರಾಜಕಾರಣಿ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ, ಅಂತಹ ರಾಜಕಾರಣಿ ಕೆ.ಎನ್.ರಾಜಣ್ಣನವರು, ಯಾವ ಶಾಸಕ ಮಾಡದೇ ಇರುವಷ್ಟು ಅಭಿವೃದ್ಧಿ ಕೆಲಸ ಇಲ್ಲಿ ಆಗಿದೆ. ಕೆ.ಎನ್.ರಾಜಣ್ಣ ಸಿಕ್ಕಿರುವುದು ಈ ಕ್ಷೇತ್ರದ ಪುಣ್ಯ ಎಂದು ಶ್ಲಾಘಿಸಿದರು.







