ಬೆಳ್ತಂಗಡಿ: ಪತ್ರಿಕಾ ದಿನಾಚರಣೆ

ಬೆಳ್ತಂಗಡಿ, ಜು.1: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವಂತಹ ಇಂದಿನ ಸನ್ನಿವೇಶದಲ್ಲಿ ಪತ್ರಕರ್ತರು ಚಳುವಳಿಗಾರರಾಗಿ, ಹೋರಾಟಗಾರರಾಗಿ ಗುರುತಿಸಿಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸದಾಶಿವ ಶೆಣೈ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ಶ್ರೀಗುರುನಾರಾಯಣ ಸಭಾಂಗಣದಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜಕಾರಣಿಗಳು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದರೆ, ಅಧಿಕಾರಿಗಳು ಹಣಮಾಡುವುದೇ ತಮ್ಮ ಉದ್ದೇಶವೆಂದು ತಿಳಿದುಕೊಂಡಂತಿದೆ. ಹೀಗಾಗಿ ಇವರಿಬ್ಬರಿಂದಲು ಸಮಾಜ ಕಟ್ಟಲು ಸಾಧ್ಯವಿಲ್ಲ ಎಂಬುದು ನಿಶ್ಚಿತ. ಹೀಗಾಗಿ ಇಂದು ಸಮಾಜ ಪತ್ರಕರ್ತರ ಕಡೆಗೆ ನೋಡುತ್ತಿದೆ. ಉತ್ತಮ ಸಮಾಜ ಕಟ್ಟಲು ನಾವು ಹೆಚ್ಚಿನ ಜವಾಬ್ದಾರಿ ಹೊರಬೇಕಾಗಿದೆ. ನ್ಯಾಯಾಂಗ, ಶಾಸಕಾಂಗದಲ್ಲೂ ಒಳ್ಳೆಯವರಿದ್ದಾರೆ. ಅವರನ್ನು ಗುರುತಿಸುವ ಕೆಲಸ ಪತ್ರಕರ್ತರಿಂದಾಗಬೇಕು. ಸಮಾಜದ ರೋಗವನ್ನು ನಿವಾರಿಸುವ ಕಾರ್ಯ ನಾವು ಮಾಡಬೇಕಾಗಿದೆ ಎಂದರು.
ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರು, ಮೂವತ್ತೈದು ವರ್ಷಗಳ ಹಿಂದಿನ ವರದಿಗಾರಿಕೆಗೂ ಇಂದಿನದಕ್ಕೂ ಬಹಳಷ್ಟು ವ್ಯತ್ಯಾಸಗಳನ್ನು ಕಂಡಿದೆ. ಇಂದು ಸ್ವಂತಿಕೆ ಇಲ್ಲದ ವರದಿಗಾರಿಕೆಯೇ ಹೆಚ್ಚಾಗಿದೆ. ಅಚ್ಚುಕಟ್ಟುತನದಿಂದ, ಸ್ವಾತಂತ್ರ್ಯದಿಂದ, ಸಮಚಿತ್ತತೆಯಿಂದ, ಬದ್ಧತೆಯಿರುವ ಬರವಣಿಗೆಯೇ ಇಲ್ಲವಾಗಿದೆ. ಪತ್ರಕರ್ತನಿಗೆ ಸಹಜ ಕುತೂಹಲ ಇರಬೇಕೆ ಹೊರತು ಕೆಟ್ಟ ಕುತೂಹಲ ಇರಬಾರದು ಎಂದ ಬೈಕಂಪಾಡಿ ಅವರು ನಿಮಗೆ ಸ್ವಾತಂತ್ರ್ಯವಿದೆ, ಅವಕಾಶವಿದೆ, ಸ್ವಂತ ವ್ಯಾಖ್ಯಾನಕ್ಕೆ ಅವಕಾಶವಿದ್ದರೂ ಯಾಕೆ ಬರೆಯಲು ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಇಂದು ಒಬ್ಬ ವರದಿಗಾರ ಸುದ್ದಿ ಮಾಡಲು ಹೋದರೆ ಮರುದಿನ ಇದ್ದ ಎಲ್ಲಾ ಪತ್ರಿಕೆಗಳನ್ನೂ ಅದೇ ರೀತಿ ಬರುತ್ತದೆ. ಇನ್ನೊಬ್ಬರ ಸುದ್ದಿಯನ್ನು ಕೇಳಬಾರದು ಎಂಬ ಕನಿಷ್ಟ ಅರಿವು ಇಲ್ಲಿದಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ನಾನು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಣದ ಚಿಂತೆ ಇರಲಿಲ್ಲ. ಅನುಭವ, ಬರೆಯಬಲ್ಲೆ ಎಂಬ ಧೈರ್ಯ ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದರು.
ಬೆಳ್ತಂಗಡಿಯ ವಿಶ್ರಾಂತ ಹಿರಿಯ ಪತ್ರಕರ್ತ ಅಶೋಕ್ ಪಿ.ಎಸ್ ಅವರನ್ನು ಸಮ್ಮಾನಿಸಲಾಯಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ಅಭ್ಯಾಗತರಾಗಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮನೋಹರ ಬಳಂಜ ವಹಿಸಿದ್ದರು.
ಈ ಸಂದರ್ಭ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದ ಗುರುವಾಯನಕರೆ ಪ್ರೌಢ ಶಾಲೆ ಹಾಗೂ ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕಬ್ಬಿಣದ ಕಪಾಟುಗಳನ್ನು ಕೊಡುಗೆಯಾಗಿ ನೀಡಲಾಯಿತು. ಹಾಗೆಯೇ ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿನ ಸರಕಾರಿ ಪ್ರೌಢಶಾಲೆಗಳಲ್ಲಿ ಅತೀ ಹೆಚ್ಚಿನ ಅಂಕ ಪಡೆದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಚ್ಚಿನದ ನವೀನ್, ಮಚ್ಚಿನ ಪ್ರೌಢಶಾಲೆಯ ಸಫ್ರಿನಾ ಬಾನು, ಕಾಶೀಪಟ್ಣ ಪ್ರೌಢಶಾಲೆಯ ಪ್ರಜೇಶ್ ಹಾಗೂ ಗೇರುಕಟ್ಟೆ ಪ್ರೌಢಶಾಲೆಯ ಮೋಹಿನಿ ಎಂಬ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಸ್ಮರಣಿಕೆ ನೀಡಲಾಯಿತು.
ಸಂಘದ ಕಾರ್ಯದರ್ಶಿ ಶಿಬಿ ಧರ್ಮಸ್ಥಳ ಸ್ವಾಗತಿಸಿದರು. ಕೋಶಾಧಿಕಾರಿ ದೀಪಕ್ ಆಠವಳೆ ಉಪನ್ಯಾಸಕರ ಪರಿಚಯ ನೀಡಿದರು. ಜತೆಕಾರ್ಯದರ್ಶಿ ಪದ್ಮನಾಭ ಕುಲಾಲ್ ವಂದಿಸಿದರು. ಉಪಾಧ್ಯಕ್ಷ ಭುವನೇಶ್ ಗೇರುಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.







