ನಿಯಮ ಪಾಲಿಸದ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿದ ಶಿಕ್ಷಕ, ಶಾಲಾ ನಿರ್ದೇಶಕನ ಬಂಧನ

ಮುಂಬೈ, ಜೂ.1: ಶಾಲೆಯ ನಿಯಮ ಪಾಲಿಸದ 25 ವಿದ್ಯಾರ್ಥಿಗಳ ತಲೆ ಬೋಳಿಸಿದ ಶಿಕ್ಷಕ, ಶಾಲೆಯ ನಿರ್ದೇಶಕ ಹಾಗೂ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುಬುರ್ಬನ್ ವಿಖ್ರೋಲಿಯ ಶಾಲೆಯೊಂದರಲ್ಲಿ ಬೆಳಗ್ಗಿನ ಪ್ರಾರ್ಥನೆಯ ನಂತರ ಈ ಘಟನೆ ನಡೆದಿದೆ. ಶಾಲೆಯ ನಿಯಮದಂತೆ ಕೂದಲು ಕತ್ತರಿಸದ ಕಾರಣ ವಿದ್ಯಾರ್ಥಿಗಳಿಗೆ ಈ ಶಿಕ್ಷೆ ನೀಡಲಾಗಿದೆ.
ಕೂದಲನ್ನು ಸಣ್ಣದಾಗಿ ಕತ್ತರಿಸುವಂತೆ ಕೆಲ ದಿನಗಳ ಹಿಂದೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸೂಚನೆ ನೀಡಿತ್ತು. ಆದರೆ ಕೆಲ ವಿದ್ಯಾರ್ಥಿಗಳು ಇದನ್ನು ಪಾಲಿಸಿರಲಿಲ್ಲ. ಇದರಿಂದ ಕೋಪಗೊಂಡ ಶಾಲೆಯ ನಿರ್ದೇಶಕ ಗಣೇಶ್ ಬಟಾ, ದೈಹಿಕ ಶಿಕ್ಷಕ ಮಿಲಿಂದ್ ಝಾಂಕೆ, ಹಾಗೂ ಸಿಬ್ಬಂದಿ ತುಷಾರ್ ಗೋರ್ ವಿದ್ಯಾರ್ಥಿಗಳ ತಲೆ ಬೋಳಿಸಿದ್ದಾರೆ.
ತಲೆ ಬೋಳಿಸುವ ಸಂದರ್ಭ ಕತ್ತರಿ ತರಚಿ ಕೆಲ ವಿದ್ಯಾರ್ಥಿಗಳಿಗೆ ಗಾಯಗಳಾಗಿದೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Next Story





