ರೌಡಿ ನಾಗನ ಜಾಮೀನು ಅರ್ಜಿ ವಜಾ
ಬೆಂಗಳೂರು, ಜು.1: ನೋಟು ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೌಡಿ ವಿ.ನಾಗರಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಗರದ 70ನೆ ಎಸಿಎಂಎಂ ನ್ಯಾಯಾಲಯವು ವಜಾಗೊಳಿಸಿದೆ.
ಶನಿವಾರ ನಗರದ 70ನೆ ಎಸಿಎಂಎಂ ನ್ಯಾಯಾಲಯವು ರೌಡಿ ವಿ.ನಾಗರಾಜ್ ಜಾಮೀನು ಅರ್ಜಿ ವಜಾಗೊಳಿಸಿದ್ದು, ಆತನ ಪತ್ನಿ ಲಕ್ಷ್ಮೀಗೆ ನೀರಿಕ್ಷಣಾ ಜಾಮೀನು ನೀಡಿದೆ. ನಗರದ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ನೋಟು ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ರೌಡಿ ವಿ.ನಾಗರಾಜ್, ಆತನ ಮಕ್ಕಳಾದ ಗಾಂಧಿ, ಶಾಸ್ತ್ರಿ, ಪತ್ನಿ ಲಕ್ಷ್ಮೀ ಹಾಗೂ ಆಕೆಯ ತಂಗಿ ವಿರುದ್ಧ ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಜಾಮೀನು ಕೋರಿ ಆರೋಪಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
ಪೊಲೀಸರ ಮನವಿ: ಪ್ರಕರಣದ ತನಿಖೆ ಇನ್ನೂ ಬಾಕಿ ಇದೆ. ವಿಚಾರಣೆ ನಡೆಸಲು ಸಾಕಷ್ಟು ಸಮಯ ಬೇಕಿದೆ. ಅಲ್ಲಿಯವರೆಗೂ ಆರೋಪಿಗಳಿಗೆ ಜಾಮೀನು ನೀಡಬಾರದೆಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕರಣದ ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದರು.