ಎಐಡಿವೈಓ 51ನೆ ಸ್ಥಾಪನಾ ದಿನ ಅಂಗವಾಗಿ ಬೈಕ್ ರ್ಯಾಲಿ
ದುಶ್ಚಟಗಳಿಂದ ದೂರವಿರಲು ಯುವಕರಿಗೆ ಕರೆ

ಬೆಂಗಳೂರು, ಜು.1: ಆಧುನಿಕ ಜೀವನದ ಭರಾಟೆಯಲ್ಲಿ ದಾರಿ ತಪ್ಪುತ್ತಿರುವ ಯುವ ಜನರಿಂದ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಈ ಪ್ರಕರಣಗಳಿಂದ ಯುವ ಸಮುದಾಯದ ಮೇಲೆ ಘೋರ ಪರಿಣಾಮ ಬೀರುತ್ತಿದೆ ಎಂದು ಎಐಡಿವೈಓ ರಾಜ್ಯ ಉಪಾಧ್ಯಕ್ಷ ಕೆ.ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ.
ಎಐಡಿವೈಓ 51ನೆ ಸ್ಥಾಪನಾ ದಿನದ ಅಂಗವಾಗಿ ಶನಿವಾರ ನಗರದ ಮತ್ತಿಕೆರೆ ಬಡಾವಣೆಯ ನೇತಾಜಿ ವೃತ್ತದಲ್ಲಿ ಸಂಘಟನೆ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ಚಾಲನೆ ಕೊಟ್ಟು ಅವರು ಮಾತನಾಡಿದರು.
ಯುವಕರು ಇತ್ತೀಚಿನ ದಿನಗಳಲ್ಲಿ ಮಧ್ಯಪಾನ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಅಶ್ಲೀಲತೆಯ ಪ್ರಚಾರದಿಂದಾಗಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಸಮಾಜದಲ್ಲಿ ಹೆಚ್ಚುತ್ತಿವೆ. ಇವೆಲ್ಲವೂ ಯುವ ಸಮುದಾಯದ ಮೇಲೆ ಘೋರ ಪರಿಣಾಮ ಬೀರಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಯುವಕರ ದುಶ್ಚಟಗಳಿಂದ ಎಚ್ಚರದಿಂದ ಇರಬೇಕು ಎಂದು ಕರೆ ನೀಡಿದರು.
ಪ್ರತಿಯೊಂದು ದೇಶದಲ್ಲೂ ಎಲ್ಲಾ ಸಾಮಾಜಿಕ ಬದಲಾವಣೆಗೆ ಯುವಜನರು ಅತಿ ಮುಖ್ಯ ಪ್ರೇರಕ ಶಕ್ತಿ. ಅಪರಿಮಿತ ಚೇತನ ಹಾಗೂ ಅಪ್ರತಿಮ ಪ್ರತಿಭೆಯುಳ್ಳ ಈ ವಿಭಾಗವು ಸಮಾಜದ ಬೆಳವಣಿಗೆಗೆ ಹಾಗೂ ಪ್ರಗತಿಗೆ ಅತ್ಯಂತ ಸಹಾಯಕಾರಿಯಾಗಿದೆ. ಆದರೆ ಇಂತಹ ಶಕ್ತಿಯಾದ ಯುವಜನತೆ ಇಂದು ವ್ಯಾಪಕ ಸಮಸ್ಯೆಯಿಂದ ಬಳಲುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ವಿನಯ್ ಸಾರಥಿ ಮಾತನಾಡಿ, ಸಮಾಜದಲ್ಲಿ ಬೇರೂರಿರುವ ಜಾತಿವಾದ, ಕೋಮುವಾದದ ವಿರುದ್ಧ ಹೋರಾಡಲು, ಕೋಮು ಸಾಮರಸ್ಯವನ್ನು ಬೆಳೆಸಲು, ಸಾಂಸ್ಕೃತಿಕ ಚಳುವಳಿಯನ್ನು ಕಟ್ಟಲು ಎಐಡಿವೈಓ ಸಂಘಟನೆಯನ್ನು 51 ವರ್ಷಗಳಂದು ಸ್ಥಾಪಿಸಲಾಯಿತು. ಅದು ಈಗ ನಮ್ಮ ರಾಜ್ಯದಲ್ಲಿ ಒಂದು ಪ್ರಬಲ ಯುವಜನ ಸಂಘಟನೆಯಾಗಿ ಬೆಳೆದಿದೆ ಎಂದರು.
ಸಮಾಜವಾದಿ ಕ್ರಾಂತಿಯ ಸ್ಪೂರ್ತಿ ಪಡೆದು ಭಗತ್ ಸಿಂಗ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ನಮ್ಮ ದೇಶದಲ್ಲಿ ಇಂತಹದ್ದೇ ಕ್ರಾಂತಿ ನಡೆಯಬೇಕೆಂಬ ಕನಸು ಕಂಡಿದ್ದರು. ಭಗತ್ ಸಿಂಗ್ ಹಾಗು ನೇತಾಜಿ ಸುಭಾಷ್ ಚಂದ್ರರ ಆದರ್ಶವನ್ನು ಯುವಜನರ ಮನಸ್ಸಿನಲ್ಲಿ ಬಿತ್ತುವ ಕೆಲಸ ಸಾಗಬೇಕಿದೆ ಎಂದು ತಿಳಿಸಿದರು.
ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಸಾಂಸ್ಕೃತಿಕ ಅಧಃಪತನದಂತ ಜ್ವಲಂತ ಸಮಸ್ಯೆಗಳ ವಿರುದ್ಧ ಯುವಜನ ಚಳವಳಿ ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.







