ಚೀನಾ ಬಿಡುಗಡೆ ಮಾಡಿದ ಭೂಪಟದಲ್ಲಿ ಭಾರತದ ಪ್ರದೇಶಗಳು

ಬೀಜಿಂಗ್, ಜು. 1: ಸಿಕ್ಕಿಂ ವಲಯದಲ್ಲಿ ಭಾರತೀಯ ಸೇನಾಪಡೆ ತನ್ನ ಭೂಭಾಗವನ್ನು ಅತಿಕ್ರಿಮಿಸಿದೆ ಎಂಬ ತನ್ನ ಆರೋಪವನ್ನು ಸಾಬೀತುಪಡಿಸಲು ಚೀನಾ ಶುಕ್ರವಾರ ತನ್ನ ವಿದೇಶ ಸಚಿವಾಲಯದ ಚೀನಿ ಭಾಷೆಯ ವೆಬ್‌ಸೈಟ್‌ನಲ್ಲಿ ಭೂಪಟವೊಂದನ್ನು ಬಿಡುಗಡೆ ಮಾಡಿದೆ. ಆದರೆ, ಈ ಭೂಪಟದಲ್ಲಿ, ಈ ವಲಯದಲ್ಲಿ ಭಾರತ ಮತ್ತು ಭೂತಾನ್ ತಮ್ಮದೆಂದು ಹೇಳುವ ಭೂಭಾಗಗಳು ಚೀನಾದಲ್ಲಿವೆ!
ಭಾರತ, ಭೂತಾನ್ ಮತ್ತು ಚೀನಾಗಳ ಗಡಿಗಳು ಸಂಧಿಸುವ ಆಯಕಟ್ಟಿನ ಸ್ಥಳದ ಆಧಾರದಲ್ಲಿ ರೂಪುಗೊಂಡ ವಾಸ್ತವ ನಿಯಂತ್ರಣ ರೇಖೆಯು ಚೀನಾ ಸಚಿವಾಲಯದ ಭೂಪಟದಲ್ಲಿ ಬೇರೆಯೇ ಆಗಿದೆ.
ಚೀನಾ ತನ್ನದೆಂದು ಹೇಳಿಕೊಳ್ಳುವ ಗಡಿಯು ವಾಸ್ತವಿಕ ನಿಯಂತ್ರಣ ರೇಖೆಯೆಂದು ಭಾರತ ಮತ್ತು ಭೂತಾನ್ ಹೇಳುವ ಪ್ರದೇಶದಿಂದ ದಕ್ಷಿಣಕ್ಕೆ ತುಂಬಾ ಒಳಗಿದೆ. ಬಟಂಗ್ ಲಾವರೆಗೆ ತನ್ನ ತನ್ನ ಭೂಪ್ರದೇಶವೆಂದು ಭಾರತ ಹೇಳಿದರೆ, ವೌಂಟ್ ಗಿಪ್‌ಮೊಚಿವರೆಗೆ ತನ್ನ ಭೂಭಾಗವಿದೆ ಎಂದು ಚೀನಾ ಹೇಳಿಕೊಂಡಿದೆ.
ಡೊಂಗ್ಲಾಂಗ್ ಪ್ರದೇಶದಲ್ಲಿ ರಸ್ತೆ ನಿರ್ಮಿಸುವ ಮೂಲಕ ಯಥಾಸ್ಥಿತಿಯನ್ನು ಬದಲಾಯಿಸದಿರಿ ಎಂಬುದಾಗಿ ಭಾರತ ಮತ್ತು ಭೂತಾನ್ ಪಡೆಗಳು ರಸ್ತೆ ನಿರ್ಮಿಸುವ ತಂಡಕ್ಕೆ ಸೂಚಿಸಿದ್ದಾಗಿ ಭಾರತ ಶುಕ್ರವಾರ ಒಪ್ಪಿಕೊಂಡಿದೆ.
ರಸ್ತೆ ನಿರ್ಮಾಣ ಚಟುವಟಿಕೆಗಳು ‘ಗಂಭೀರ ಭದ್ರತಾ ಪರಿಣಾಮಗಳಿಗೆ’ ಎಡೆ ಮಾಡಿಕೊಡುತ್ತವೆ ಎಂದು ಭಾರತ ಹೇಳಿದೆ.







