ಮದ್ಯದಂಗಡಿ ತೆರೆಯಲು ಕೊಡೇರಿ ಗ್ರಾಮಸ್ಥರ ವಿರೋಧ
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ಮನವಿ

ಉಡುಪಿ, ಜು.1: ಕುಂದಾಪುರ ತಾಲೂಕು ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಗಂಗೆಬೈಲು ಹೊಸಹಿತ್ಲು ಮತ್ತು ಗಾಂಧಿ ನಗರದ ಮುಖ್ಯ ಸಂಪರ್ಕ ರಸ್ತೆಯಲ್ಲಿ ಮದ್ಯದ ಅಂಗಡಿಯನ್ನು ತೆರೆಯಲು ಅನುಮತಿ ನೀಡುವುದನ್ನು ವಿರೋಧಿಸಿ ಗ್ರಾಮಸ್ಥರು ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಹಾಗೂ ಅಬಕಾರಿ ಇಲಾಖೆಯ ಕಮಿಷನರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿಯನ್ನು ಸಲ್ಲಿಸಿದರು.
ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ರಾಷ್ಟ್ರೀಯ ಹೆದ್ದಾರಿಯಿಂದ 250ಮೀ. ದೂರದವರೆಗೆ ಇರುವ ಮದ್ಯದಂಗಡಿಯನ್ನು ತೆರವುಗೊಳಿಸಬೇ ಕಾಗಿದ್ದು, ಇದರಂತೆ ಕಿರಿಮಂಜೇಶ್ವರ ಗ್ರಾಮದ ನಾಗೂರಿನಲ್ಲಿರುವ ಮದ್ಯದ ಅಂಗಡಿಯನ್ನು ಇದೀಗ ತೆರವುಗೊಳಿಸಬೇಕಾಗಿದೆ ಎಂದು ಗ್ರಾಮಸ್ಥರು ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಆದರೆ ಇದೀಗ ಕೊಡೇರಿ ಹಾಗೂ ನಾಗೂರಿನ ಮುಖ್ಯ ಸಂಪರ್ಕ ರಸ್ತೆಯಲ್ಲಿ ರುವ ಮನೆಯೊಂದರಲ್ಲಿ ಮದ್ಯದ ಅಂಗಡಿ ಹಾಗೂ ಮಾಂಸಹಾರಿ ಹೊಟೇಲ್ ತೆರೆಯಲು ಅನುಮತಿ ನೀಡುವ ಬಗ್ಗೆ ಪ್ರಕ್ರಿಯೆಗಳು ಆರಂಭಗೊಂಡಿರುವ ಮಾಹಿತಿ ಇದೆ. ಆದರೆ ಈ ಮಾರ್ಗವು ಅಗಲ ಕಿರಿದಾಗಿದ್ದು, ಇದು ಕೊಡೇರಿ, ಹೊಸಹಿತ್ಲು, ಗಂಗೆಬೈಲು ಹಾಗೂ ಗಾಂಧಿನಗರದ ಮುಖ್ಯ ಸಂಪರ್ಕ ರಸ್ತೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಅಲ್ಲದೇ ಕೊಡೇರಿ ಬಂದರಿನ ಮೀನುಗಾರಿಕಾ ವಹಿವಾಟು ಸಹ ಇದೇ ರಸ್ತೆಯಲ್ಲಿ ನಡೆಯುತ್ತದೆ. ಆದ್ದರಿಂದ ಇಲ್ಲಿ ಮದ್ಯದಂಗಡಿಗೆ ಪರವಾನಿಗೆ ನೀಡುವುದರಿಂದ ಪರಿಸರದ ಜನತೆಗೆ ತುಂಬಾ ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೇ ಇಲ್ಲಿಂದ 20ಮೀ. ದೂರದಲ್ಲಿ ದೈವಸ್ಥಾನವೊಂದಿದೆ. ಇದು ಜನರ ಧಾರ್ಮಿಕ ಭಾವನೆಗೂ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇದು ಜನವಸತಿ ಪ್ರದೇಶವಾಗಿರುವುದರಿಂದ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಇದೇ ಮುಖ್ಯರಸ್ತೆಯಲ್ಲಿ ಸಂಚರಿಸುವುದರಿಂದ ಇಲ್ಲಿ ಮದ್ಯ ದಂಗಡಿ ತೆರೆಯುವುದರಿಂದ ಎಲ್ಲರಿಗೂ ಇದರಿಂದ ತೊಂದರೆಯುಂಟಾಗುತ್ತದೆ. ಆದುದರಿಂದ ಇಲ್ಲಿ ಮದ್ಯದಂಗಡಿ ಹಾಗೂ ಮಾಂಸಹಾರಿ ಹೊಟೇಲ್ ತೆರೆಯಲು ಅನುಮತಿ ನೀಡದಂತೆ ಜಿಲ್ಲಾಧಿಕಾರಿಗಳು ಹಾಗೂ ಅಬಕಾರಿ ಇಲಾಖೆಯ ಕಮಿಷನರ್ ಅವರಿಗೆ ನೀಡಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.







