ಪತ್ರಕರ್ತರು ಸತ್ಯಕ್ಕೆ ಸನಿಹವಾದ ವರದಿಗಾರಿಕೆ ಮಾಡಬೇಕು: ರಾಜು ಮೊಗವೀರ
.jpg)
ಮುಂಡಗೋಡ, ಜು.1: ಪತ್ರಕರ್ತರು ಬದ್ಧತೆ, ವಸ್ತು ನಿಷ್ಠೆ, ಸತ್ಯಕ್ಕೆ ಸನಿಹವಾದ ಸುದ್ದಿಯನ್ನು ಬರೆಯಬೇಕು ಎಂದು ಶಿರಸಿ ಉಪವಿಭಾಗಧಿಕಾರಿ ರಾಜೂ ಮೊಗವೀರ ಹೇಳಿದರು.
ಅವರು ಶಿರಸಿಯಲ್ಲಿ ಪತ್ರಕರ್ತರ ಭವನದಲ್ಲಿ ಶನಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಕರ್ತರ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತ ಸಚ್ಚಿದಾನಂದವರಿಗೆ ಕೆ. ಶ್ಯಾಮರಾವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪತ್ರಕರ್ತರು ತಮ್ಮ ಬದ್ದತೆ ಅರಿತುಕೊಳ್ಳುವುದು ಉತ್ತಮ. ಏನೇ ಬರೆಯ ಬೇಕಾದರು ಬಹಳ ವಿಚಾರಮಾಡಿ ಜವಾಬ್ದಾರಿಯಿಂದ ಬರೆಬೇಕಾಗುತ್ತೆ. ಏಕೆಂದರೆ ಪತ್ರಿಕೆಯಲ್ಲಿ ಬಂದಂತಹ ಸುದ್ದಿಗಳು ಅಧಿಕೃತವಾಗುತ್ತವೆ. ಧಾವಂತದಲ್ಲಿ ಬರೆಯದೇ ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯಬೇಕು.
ಕಾಡಿನಲ್ಲಿರುವ ಸಿಂಹಕ್ಕೆ ಭೇಟೆಯಾಡುವುದು ಕಲಿಸಬೇಕಾಗಿಲ್ಲ, ನೀರಿನಲ್ಲಿರುವ ಮೀನಿಗೆ ಈಜು ಹೇಳಕೊಡಬೇಕಾಗಿಲ್ಲ. ಹಾಗೆಯೇ ಪತ್ರಕರ್ತನಿಗೆ ಹೇಗೆ ಬರೆಯಬೇಕು ಎಂದು ಹೇಳಕೊಡಬೇಕಾಗಿಲ್ಲ ಎಂದರು.
ಹೊಸ ದಿಗಂತ ಪತ್ರಿಕೆಯ ಹುಬ್ಬಳ್ಳಿ ಆವೃತಿಯ ಸಂಪಾದಕ ವಿಠ್ಠಲ್‌ದಾಸ ಕಾಮತ್ ಮಾತನಾಡಿ, ಹೊಟ್ಟೆ ತುಂಬಿಕೊಳ್ಳಲು ಪತ್ರಕರ್ತನಾಗಬಾರದು. ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತ ಕೆಲಸಮಾಡಬೇಕು. ಜಾತಿ ಆಧಾರಿತ ವರದಿಗಾರಿಕೆಯಿಂದ ದೂರ ಇರಬೇಕು. ಸಮಾಜದಲ್ಲಿ ಬೆರೆತು, ಸಮಾಜದಲ್ಲಿರುವ ಎಲ್ಲ ಜಾತಿ ಮತದವರ ನೋವಿಗೆ ಸ್ಪಂದಿಸುವಂತ ಕೆಲಸಮಾಡಬೇಕು. ಒಂದು ತಾಲೂಕಯ ವರದಿಗಾರನೆಂದರೆ ಆ ತಾಲೂಕಿನ ಶಾಸಕ ಇದ್ದಂತೆ ಎಂದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಂಬಗಳಿಗೆ ಗೆದ್ದಲು ಹತ್ತಿದಾಗ ಅದಕ್ಕೆ ಸುಣ್ಣ ಬಣ್ಣ ಬಳೆಯುವ ಕೆಲಸವನ್ನು ಪತ್ರಿಕಾರಂಗ ಮಾಡಬೇಕಾಗುತ್ತದೆ. ಒಬ್ಬ ರೋಗಿಯ ಮನಷ್ಯ ದೇಹವನ್ನು ವೈದ್ಯ ಆರೋಗ್ಯವಂತ ಮಾಡುತ್ತಾನೆ. ಹಾಗೆಯೇ ಇಡೀ ಸಮಾಜವನ್ನು ಆರೋಗ್ಯವಂತ ಮಾಡುವ ತಾಕತ್ತು ಪತ್ರಕರ್ತನಿಗಿದೆ ಎಂದರು.
ಪತ್ರಕರ್ತರು ಹಣದ ಹಿಂದೆ ಗಿರಕಿಹೊಡೆದರೆ ಸತ್ಯ ಸುದ್ದಿಯನ್ನು ಮರೆಮಾಚ ಬೇಕಾಗುತ್ತದೆ. ಹೀಗಾದರೆ ನಾವು ಸಮಾಜವನ್ನು ಸುಧಾರಿಸುವುದು ಯಾವಾಗ ಎಂದರು. ಪತ್ರಕರ್ತರು ಧನಾತ್ಮಕವಾಗಿ ವಿಚಾರಮಾಡುವುದನ್ನು ಕಲಿಬೇಕು ಋಣಾತ್ಮಕ ವಿಚಾರಮಾಡುವುದನ್ನು ಬೀಡಬೇಕು.
ಪ್ರಶಸ್ತಿಗಳು ಹಣ ವಸೂಲಿಯ ಮೂಲಕ ಪಡಯದೇ ಸಾಧನೆಯ ಮೂಲಕ ಪತ್ರಕರ್ತನಿಗೆ ಬರಬೇಕು ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಬಕ್ಕಳ, ನರಸಿಂಹ ಸಾತೋಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಶೆಟ್ಟಿ, ಕಾಂಗ್ರೆಸ್ ಹಿರಿಯ ಧುರಿಣ ಟಿಎಸ್‌ಎಸ್ ಅಧ್ಯಕ್ಷ ಶಾಂತರಾಮ ಶೀಗೆಹಳ್ಳಿ, ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರು ಸೇರಿದಂತೆ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಘವೇಂದ್ರ ಹೆಬ್ಬಾರ ನಿರೂಪಿಸಿ ವಂದಿಸಿದರು







