ಜಿಎಸ್‌ಟಿ: ಗೊಂದಲದಲ್ಲಿ ವ್ಯಾಪಾರಿಗಳು, ವ್ಯಾಪಾರ ಇಳಿಕೆ

ಮುಂಬೈ, ಜು. 1: ಭಾರತದಲ್ಲಿ ನೂತನ ತೆರಿಗೆ ಜಿಎಸ್‌ಟಿ ಪರಿಚಯಿಸಿದ ಮೊದಲ ದಿನ ಗೊಂದಲಕ್ಕೆ ಒಳಗಾಗಿರುವ ಮುಂಬೈ ವ್ಯಾಪಾರಿಗಳು ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ಭೇಟಿಯಾಗಿ ಮತ್ತೆಮತ್ತೆ ಪ್ರಶ್ನಿಸುತ್ತಿದ್ದಾರೆ.
ಕೇಂದ್ರ ಸರಕಾರ ಮಧ್ಯರಾತ್ರಿ ಜಿಎಸ್‌ಟಿ ಜಾರಿಗೊಳಿಸಿತು. ದೇಶದ ಅತೀ ದೊಡ್ಡ ತೆರಿಗೆ ವ್ಯವಸ್ಥೆ ಸುಧಾರಣೆ ಎಂದು ಬಣ್ಣಿಸಲಾದ ಈ ಏಕರೂಪಿ ತೆರಿಗೆ ದೇಶದಲ್ಲಿರುವ ಹಲವು ತೆರಿಗಳನ್ನು ಏಕೀಕೃತಗೊಳಿಸುವುದು ಹಾಗೂ ಆರ್ಥಿಕ ಬೆಳವಣಿಗೆ ಉತ್ತೇಜಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ವ್ಯಾಪಾರಿಗಳಲ್ಲಿ ಗೊಂದಲ ಉಂಟು ಮಾಡಿದೆ. ಈ ಹೊಸ ತೆರಿಗೆ ವ್ಯವಸ್ಥೆ ಹೇಗೆ ನಿರ್ವಹಿಸಲಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಇದು ಕೇವಲ ಆರಂಭ. ಈಗಾಗಲೇ ವ್ಯಾಪಾರಸ್ಥರಲ್ಲಿ ಹಲವು ಗೊಂದಲಗಳಿವೆ. ನಾವು ಈ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲಿದ್ದೇವೆ ಎಂದು ಮಹಾರಾಷ್ಟ್ರ ಕೈಗಾರಿಕೆ ಹಾಗೂ ವ್ಯಾಪಾರ ಸಂಘಟನೆಯ ಅ್ಯಕ್ಷ ಮೋಹನ್ ಗುರಾನಿ ತಿಳಿಸಿದ್ದಾರೆ.
ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳು ಶುಕ್ರವಾರ ರಾತ್ರಿಯಿಂದ ಹೊಸ ತೆರಿಗೆ ವ್ಯವಸ್ಥೆ ಅಳವಡಿಸಿಕೊಂಡಿವೆ. ಹೊಸ ತೆರಿಗೆಯಿಂದ ಶನಿವಾರ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ, ಸೋಮವಾರ ತೊಂದರೆ ಅನುಭವ ಆಗಬಹುದು ಎಂದು ಜುಹುವಿನ ಹೊಟೇಲ್ ಉತ್ಸವ್‌ನ ಮಾಲಕ ಅರವಿಂದ ಶೆಟ್ಟಿ ಹೇಳಿದ್ದಾರೆ.
ಸಗಟು ಜವಳಿ ಮಾರುಕಟ್ಟೆಗಳು ತೆರೆದಿವೆ. ಆದರೆ, ಯಾವುದೇ ಉತ್ಸಾಹ ಇಲ್ಲ. ಹೊಸ ತೆರಿಗೆಯಿಂದ ನಮಗೆ ಯಾವುದೇ ಪ್ರಯೋಜನ ಇಲ್ಲ ಎಂದು ಜಿಎಸ್‌ಟಿ ವಿರುದ್ಧ ಇತ್ತೀಚೆಗೆ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದ ಮಂಗಳ್‌ದಾಸ್ ಮಾರುಕಟ್ಟೆ ಹಾಗೂ ಸ್ವದೇಶಿಯಂತಹ ಪ್ರದೇಶಗಳ ವ್ಯಾಪಾರಸ್ಥರು ಹೇಳಿದ್ದಾರೆ. ಜವಳಿ ವ್ಯಾಪಾರಿಗಳು ತೀವ ಆತಂಕಗೊಂಡಿದ್ದಾರೆ ಎಂದು ಟೆಕ್ಸ್‌ಟೈಲ್ ಟ್ರೇಡ್ ಅಸೋಸಿಯೇಶನ್ ಸಮಿತಿ ಜಂಟಿ ಕ್ರಿಯಾ ಸಮಿತಿ ಸಂಚಾಲಕ ರಾಯ್‌ಚಂದ್ ಬಿನಾಕಿಯಾ ತಿಳಿಸಿದ್ದಾರೆ.
ಸ್ಟೈನ್‌ಲೆಸ್ ಸ್ಟೀಲ್ ಹಾಗೂ ಪಾತ್ರೆಗಳ ಅಂಗಡಿಗಳಲ್ಲಿ ವ್ಯಾಪಾರ ಇಳಿಕೆಯಾಗಿದೆ. ಹೊಸ ತೆರಿಗೆಯಿಂದ ಜನರು ಗೊಂದಲಗೊಂಡಿದ್ದಾರೆ. ಆದುದರಿಂದ ವ್ಯಾಪಾರ ಕಡಿಮೆ ಎಂದು ಕಾಂತಿಲಾಲ್ ಆ್ಯಂಡ್ ಸನ್ಸ್‌ನ ಸುನೀಲ್ ಶರ್ಮಾ ಹೇಳಿದ್ದಾರೆ.







