ಈರ್ಸ್ಟ್‌ಬರ್ನ್ ಓಪನ್: ಜೊಕೊವಿಕ್ ಫೈನಲ್‌ಗೆ

ಈಸ್ಟ್‌ಬರ್ನ್, ಜು.1: ರಶ್ಯದ ಡ್ಯಾನಿಲ್ ಮೆಡ್ವೆಡೆವ್‌ರನ್ನು ಮಣಿಸಿದ ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ ಈರ್ಸ್ಟ್‌ಬರ್ನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ.
ಇಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಸರ್ಬಿಯದ ಜೊಕೊವಿಕ್ ಅವರು ಡ್ಯಾನಿಲ್‌ರನ್ನು 6-4, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಗಾಯೆಲ್ ಮೊನ್‌ಫಿಲ್ಸ್‌ರನ್ನು ಎದುರಿಸಲಿದ್ದಾರೆ.
ಮತ್ತೊಂದು ಸೆಮಿ ಫೈನಲ್‌ನಲ್ಲಿ ಫ್ರಾನ್ಸ್‌ನ ಮೊನ್‌ಫಿಲ್ಸ್ ತಮ್ಮದೇ ದೇಶದ ರಿಚರ್ಡ್ ಗಾಸ್ಕಟ್‌ರನ್ನು 6-2, 6-7(7/9), 7-6(7/4) ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ವಿಶ್ವದ ನಂ.4ನೆ ಆಟಗಾರ ಜೊಕೊವಿಕ್ ಆಲ್ ಇಂಗ್ಲೆಂಡ್‌ನಲ್ಲಿ ಮೂರು ಪ್ರಶಸ್ತಿಗಳನ್ನು ಜಯಿಸಿರುವ ಹಿನ್ನೆಲೆಯಲ್ಲಿ ಎರಡನೆ ಶ್ರೇಯಾಂಕದ ಆಟಗಾರನಾಗಿ ವಿಂಬಲ್ಡನ್ ಟೂರ್ನಿಯಲ್ಲಿ ಆಡಲಿದ್ದಾರೆ. ಜನವರಿಯಲ್ಲಿ ದೋಹಾದಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದ್ದ ಜೊಕೊವಿಕ್ ಇದೀಗ ಪ್ರಶಸ್ತಿ ಬರ ನೀಗಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಇದೇ ವೇಳೆ ಬ್ರಿಟನ್ ಆಟಗಾರ್ತಿ ಜೊಹನ್ನಾ ಕಾಂಟಾ ಮಹಿಳೆಯರ ಸೆಮಿ ಫೈನಲ್ ಪಂದ್ಯದಿಂದ ಹಿಂದೆ ಸರಿದಿದ್ದು, ಸೋಮವಾರದಿಂದ ಆರಂಭವಾಗಲಿರುವ ವಿಂಬಲ್ಡನ್ ಟೂರ್ನಿಯಲ್ಲಿ ಆಡುವ ಬಗ್ಗೆ ಸಂಶಯವಿದೆ.
ಬೆನ್ನುನೋವಿನಿಂದ ಬಳಲುತ್ತಿರುವ ಕಾಂಟಾ ಅವರು ಕರೊಲಿನಾ ಪ್ಲಿಸ್ಕೋವಾ ವಿರುದ್ಧದ ಸೆಮಿ ಫೈನಲ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ.







