ಕಾರು ಅಪಘಾತ: ಕೊಲೆ ಮೊಕದ್ದಮೆ ದಾಖಲಿಸಿದ್ದಕ್ಕೆ ವೀನಸ್ ವಿಲಿಯಮ್ಸ್‌ಗೆ ಬೇಸರ

ಮಿಯಾಮಿ, ಜು.1: ಕಾರು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬದವರು ತನ್ನ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿರುವುದಕ್ಕೆ ಅಮೆರಿಕದ ಟೆನಿಸ್ ಸ್ಟಾರ್ ವೀನಸ್ ವಿಲಿಯಮ್ಸ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಜೂ.9 ರಂದು ನಡೆದ ಕಾರು ಅಪಘಾತದಲ್ಲಿ ವಿಲಿಯಮ್ಸ್ ತಪ್ಪು ಎಸೆಗಿದ್ದರು ಎಂದು ಪೊಲೀಸರು ಹೇಳಕೆ ನೀಡಿರುವುದಕ್ಕೆ ಇದೇ ಮೊದಲ ಬಾರಿ ಫೇಸ್‌ಬುಕ್ ಪೇಜ್‌ನಲ್ಲಿ ವಿಲಿಯಮ್ಸ್ ಪ್ರತಿಕ್ರಿಯಿಸಿದ್ದಾರೆ.
ಈ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ಅಪಘಾತದಲ್ಲಿ ಮೃತಪಟ್ಟಿರುವ ಜೆರೊಮ್ ಬಾರ್ಸನ್ ಕುಟುಂಬ ಹಾಗೂ ಸ್ನೇಹಿತರಿಗೆ ಸಂತಾಪ ಸೂಚಿಸುವೆ. ನಾನು ಆ ಕುಟುಂಬದ ದುಃಖದಲ್ಲಿ ಭಾಗಿಯಾಗುವೆ ಎಂದು ವಿಲಿಯಮ್ಸ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
37ರ ಹರೆಯದ ವಿಲಿಯಮ್ಸ್ ಏಳು ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದು, 2000 ರಿಂದ 2008ರ ತನಕ ಐದು ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ್ದರು. 20ನೆ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿರುವ ವಿಲಿಯಮ್ಸ್ ಸೋಮವಾರ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂನ ಎಲಿಸ್ ಮೆರ್ಟಿನ್ಸ್‌ರನ್ನು ಎದುರಿಸಲಿದ್ದಾರೆ.
ಫ್ಲೋರಿಡಾದ ಪಾಮ್ ಬೀಚ್ ಗಾರ್ಡನ್ಸ್‌ನಲ್ಲಿ ನಡೆದ ಕಾರುಗಳ ಮುಖಾಮುಖಿ ಢಿಕ್ಕಿ ಪ್ರಕರಣದಲ್ಲಿ ಮೃತಪಟ್ಟಿರುವ ಬಾರ್ಸನ್ ಕುಟುಂಬ ಸದಸ್ಯರು ವಿಲಿಯಮ್ಸ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದು, ವಿಲಿಯಮ್ಸ್ ಈ ಪ್ರಕರಣದಲ್ಲಿ ದೋಷಿಯಲ್ಲ ಎಂದು ಅಟಾರ್ನಿ ಮೈಕಲ್ ಸ್ಟಿಂಗೆರ್ ಎಬಿಸಿ ಟೆಲಿವಿಷನ್‌ಗೆ ಶುಕ್ರವಾರ ತಿಳಿಸಿದ್ದಾರೆ.
ಜೂ.9ರಂದು ನಡೆದಿದ್ದ ಕಾರು ಅಪಘಾತದಲ್ಲಿ ಬಾರ್ಸನ್‌ಗೆ ತಲೆಗೆ ಗಂಭೀರ ಗಾಯವಾಗಿದ್ದು, ಎರಡು ವಾರಗಳ ಬಳಿಕ ಜೂ.22ರಂದು ಅವರು ಮೃತಪಟ್ಟಿದ್ದರು.
ಬಾರ್ಸನ್ ಕಾರಿಗೆ ಢಿಕ್ಕಿ ಹೊಡೆಯುವ ಮೊದಲು ವಿಲಿಯಮ್ಸ್ ಕೇವಲ 5 ಕಿ.ಮೀ. ದೂರ ಕಾರನ್ನು ಚಲಾಯಿಸಿದ್ದರು ಎಂದು ಪೊಲೀಸರು ಅಂದಾಜಿಸಿದ್ದಾರೆ. ಇದೊಂದು ದುರದೃಷ್ಟಕರ ಅಪಘಾತವಾಗಿದ್ದು, ಮೃತ ಬಾರ್ಸನ್ ಕುಟುಂಬದವರಿಗೆ ವಿಲಿಯಮ್ಸ್ ಸಂತಾಪ ವ್ಯಕ್ತಪಡಿಸಿದ್ದಾರೆ ಎಂದು ವಿಲಿಯಮ್ಸ್ ಅಟಾರ್ನಿ ಮಾಲ್ಕಂ ಕುನ್ನಿಂಗ್‌ಹ್ಯಾಮ್ ಹೇಳಿದ್ದಾರೆ.
ವಿಲಿಯಮ್ಸ್ ಬಲಬದಿಯ ರಸ್ತೆಯನ್ನು ಬ್ಲಾಕ್ ಮಾಡಿ ಇತರ ವಾಹನಗಳಿಗೆ ತೊಂದರೆಪಡಿಸಿರುವ ಹಿನ್ನೆಲೆಯಲ್ಲಿ ಅವರು ತಪ್ಪಿತಸ್ಥರು ಎಂದು ಪೊಲೀಸ್ ವರದಿ ಹೇಳುತ್ತಿದೆ.







