ರಾಮ್‌ಕುಮಾರ್ ಸಾಧನೆ ಶ್ಲಾಘನೀಯ: ರಮೇಶ್ ಕೃಷ್ಣನ್
ಚೆನ್ನೈ, ಜು.1: ವಿಶ್ವದ ನಂ.8ನೆ ಆಟಗಾರ ಡೊಮಿನಿಕ್ ಥೀಮ್‌ರನ್ನು ಮಣಿಸಿರುವ ಚೆನ್ನೈ ಮೂಲದ ರಾಮನಾಥನ್ ರಾಮ್‌ಕುಮಾರ್ ಟೆನಿಸ್ ಅಭಿಮಾನಿಗಳ ಗಮನವನ್ನು ತನ್ನತ್ತ ಸೆಳೆದಿದ್ದರು. ಅವರ ಈ ಸಾಧನೆಯನ್ನು ಭಾರತದ ಮಾಜಿ ಡೇವಿಸ್‌ಕಪ್ ಆಟಗಾರ ರಮೇಶ್ ಕೃಷ್ಣನ್ ಶ್ಲಾಘಿಸಿದ್ದು, ಈ ಗೆಲುವು ಮುಂದಿನ ದೊಡ್ಡ ಸಾಧನೆಗೆ ನಾಂದಿಯಾಗಲಿ ಎಂದು ಹಾರೈಸಿದ್ದಾರೆ.
ರಾಮ್‌ಕುಮಾರ್ ಇತ್ತೀಚೆಗೆ ಅಂಟಲಿಯ ಓಪನ್‌ನಲ್ಲಿ ಅಗ್ರ ಶ್ರೇಯಾಂಕದ ಡೊಮಿನಿಕ್ ಥೀಮ್‌ರನ್ನು 6-3, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಆದರೆ, ಮುಂದಿನ ಸುತ್ತಿನಲ್ಲಿ ಮಾರ್ಕಸ್ ಬಾಘ್‌ಡಾಟಿಸ್ ವಿರುದ್ಧ ಸೋತಿದ್ದರು.
ರಾಮ್‌ಕುಮಾರ್ ಅವರು ಡೊಮಿನಿಕ್ ವಿರುದ್ಧ ದೊಡ್ಡ ಗೆಲುವು ಸಾಧಿಸಿದ್ದಾರೆ. ಇದೇ ಗೆಲುವನ್ನು ಮುಂದುವರಿಸುವ ವಿಶ್ವಾಸ ನನಗಿದೆ. ಆದರೆ ಬಾಘ್‌ಡಾಟಿಸ್ ವಿರುದ್ಧ ಸೋತಿದ್ದಕ್ಕೆ ಬೇಸರವಾಗಿದೆ. ಡೊಮಿನಿಕ್ ವಿರುದ್ಧದ ಗೆಲುವು ರಾಮ್‌ಕುಮಾರ್‌ಗೆ ಆತ್ಮವಿಶ್ವಾಸವನ್ನು ವೃದ್ಧಿಸಿದೆ ಎಂದು ಕೈಷ್ಣನ್ ಹೇಳಿದ್ದಾರೆ.
ಕೃಷ್ಣನ್ 1989ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಗ್ರ ಶ್ರೇಯಾಂಕದ ಮ್ಯಾಟ್ಸ್ ವಿಲ್ಯಾಂಡರ್ ವಿರುದ್ಧ ಜಯ ಸಾಧಿಸಿ ಗಮನ ಸೆಳೆದಿದ್ದರು.





