NDTVಯ ಪತ್ರಕರ್ತ ಹಾಗೂ ಕುಟುಂಬಸ್ಥರನ್ನು ಬೆದರಿಸಿ “ಜೈ ಶ್ರೀ ರಾಮ್” ಎಂದು ಹೇಳಿಸಿದ ಬಜರಂಗಿಗಳು

ಬಿಹಾರ, ಜು.2: ಎನ್ ಡಿ ಟಿವಿಯ ಪತ್ರಕರ್ತ ಹಾಗೂ ಅವರ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರನ್ನು ತಡೆದ ಬಜರಂಗದಳದ ಕಾರ್ಯಕರ್ತರು “ಜೈ ಶ್ರೀ ರಾಮ್” ಎಂದು ಹೇಳಲು ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಈ ರೀತಿ ಹೇಳದಿದ್ದರೆ ಅವರ ಕಾರನ್ನು ಸುಟ್ಟು ಹಾಕುವುದಾಗಿಯೂ ದುಷ್ಕರ್ಮಿಗಳು ಬೆದರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಬಿಬಿಸಿ (BBC) ವರದಿ ಮಾಡಿದ್ದು, ಎನ್ ಡಿ ಟಿವಿಯ ಪತ್ರಕರ್ತ ಮುನ್ನೆ ಭಾರ್ತಿ ಹಾಗೂ ಅವರ ಪೋಷಕರು, ಪತ್ನಿ ಹಾಗೂ ಇಬ್ಬರು ಮಕ್ಕಳು ಬಿಹಾರದ ವೈಶಾಲಿ ಜಿಲ್ಲೆಯಿಂದ ಸಮಸ್ತಿಪುರದ ರಹೀಮಾಬಾದ್ ಗ್ರಾಮಕ್ಕೆ ತೆರಳುತ್ತಿದ್ದರು. ಕಾರು ಮುಝಫ್ಫರ್ ಪುರ ಸಮೀಪಿಸುತ್ತಲೇ ಅಲ್ಲಿದ್ದ ಟೋಲ್ ಬೂತ್ ಒಂದರಲ್ಲಿ ವಾಹನಗಳು ನಿಂತಿತ್ತು. ಟ್ರಕ್ಕೊಂದನ್ನು ಹೆದ್ದಾರಿಯ ಮಧ್ಯ ಅಡ್ಡವಾಗಿ ನಿಲ್ಲಿಸಲಾಗಿತ್ತು. ಈ ಬಗ್ಗೆ ಮುನ್ನೆ ಭಾರ್ತಿ ದಾರಿಹೋಕರೋರ್ವರಲ್ಲಿ ಪ್ರಶ್ನಿಸಿದ್ದು, “ನೀವು ಹಿಂತಿರುಗಿ ಹೋಗಿ, ಇಲ್ಲದಿದ್ದರೆ ಬಜರಂಗದಳ ಕಾರ್ಯಕರ್ತರು ನಿಮ್ಮ ಕಾರಿಗೆ ಬೆಂಕಿ ಹಚ್ಚಬಹುದು” ಎಂದು ಆ ವ್ಯಕ್ತಿ ಎಚ್ಚರಿಸಿದ್ದರು.
ಇದರಿಂದ ಹೆದರಿದ ಭಾರ್ತಿ ತನ್ನ ಕುಟುಂಬವನ್ನು ರಕ್ಷಿಸಲು ಕಾರನ್ನು ಹಿಂದಕ್ಕೆ ತಿರುಗಿಸಿದರು. ಈ ಸಂದರ್ಭ ಕೇಸರಿ ಬಟ್ಟೆಗಳನ್ನು ಧರಿಸಿದ ಐದು ಮಂದಿ ಕಾರಿನೆಡೆಗೆ ಧಾವಿಸಿದರು. ಅವರಲ್ಲಿ ದೊಣ್ಣೆಗಳಿತ್ತು. ಇವರಲ್ಲಿ ಒಬ್ಬ ಕಾರಿನೊಳಕ್ಕೆ ಇಣುಕಿದ್ದು, ಭಾರ್ತಿಯವರ ತಂದೆ ಹಾಗೂ ಶಿರವಸ್ತ್ರ ಧರಿಸಿದ್ದ ಭಾರ್ತಿಯವರ ಪತ್ನಿಯನ್ನು ಕಂಡು, ಜೋರಾಗಿ “ಜೈ ಶ್ರೀ ರಾಮ್” ಎಂದು ಬೊಬ್ಬಿಡುತ್ತಾ ಭಾರ್ತಿಯವರ ಕುಟುಂಬಸ್ಥರೂ “ಜೈ ಶ್ರೀ ರಾಮ್” ಎಂದು ಹೇಳಬೇಕು, ಇಲ್ಲದಿದ್ದರೆ ಕಾರನ್ನು ಸುಟ್ಟು ಹಾಕುತ್ತೇವೆ ಎಂದು ಬೆದರಿಸಿದ್ದಾನೆ.
ತನ್ನ ಕುಟುಂಬಸ್ಥರ ಪ್ರಾಣಕ್ಕೆ ಅಪಾಯವಾಗುವುದನ್ನು ಅರಿತ ಭಾರ್ತಿ “ಜೈ ಶ್ರೀ ರಾಮ್” ಎಂದು ಹೇಳಿದ್ದಾರೆ. ನಂತರ ಅವರನ್ನು ಬಜರಂಗಿಗಳು ಬಿಟ್ಟಿದ್ದಾರೆ. ಈ ಬಗ್ಗೆ ಭಾರ್ತಿ ಟ್ವೀಟ್ ಮಾಡಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.







