40 ರೂ.ಗಾಗಿ ಮೂರು ವರ್ಷಗಳ ಕಾನೂನು ಸಮರದಲ್ಲಿ ಗೆದ್ದ ವೃದ್ಧ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜು.2: ಹಿಮಾಚಲ ಪ್ರದೇಶದ ಲೇಖರಾಜ್(70) ತನಗೆ ಅನ್ಯಾಯ ವಾಗಿದೆ ಎನ್ನುವುದನ್ನು ಸಾಬೀತು ಮಾಡಲು ಮೂರು ವರ್ಷಗಳ ಸುದೀರ್ಘ ಹೋರಾಟ ನಡೆಸಿ ಯಶಸ್ವಿಯಾಗಿದ್ದಾರೆ. ಮನೆಯಲ್ಲಿ ಹಾಯಾಗಿ ವಿಶ್ರಾಂತಿ ಪಡೆಯುವ ವಯಸ್ಸಿನಲ್ಲಿ ಲೇಖರಾಜ್ 2014ರಲ್ಲಿ ತನಗೆ ವಿಧಿಸಲಾಗಿದ್ದ ಹೆಚ್ಚುವರಿ ದಂಡದ ಮೊತ್ತ 40 ರೂ.ಗಳನ್ನು ವಾಪಸ್ ಪಡೆಯುವ ಹಕ್ಕಿಗಾಗಿ ತನ್ನ ಗ್ರಾಮದಿಂದ ದಿಲ್ಲಿಗೆ ಅಲೆದಾಡುತ್ತಿದ್ದರು.
ರಾಷ್ಟ್ರೀಯ ಗ್ರಾಹಕ ದೂರುಗಳ ಪರಿಹಾರ ಆಯೋಗ(ಎನ್ಸಿಡಿಆರ್ಸಿ)ದಲ್ಲಿ ನಡೆಯುತ್ತಿದ್ದ ಪ್ರಕರಣದ ವಿಚಾರಣೆಗಾಗಿ ದಿಲ್ಲಿಗೆ ಪ್ರಯಾಣಿಸಲು ಲೇಖರಾಜ್ ಪ್ರತಿಬಾರಿ ವ್ಯಯಿಸುತ್ತಿದ್ದ 400 ರೂ.ಗಳಿಗೆ ಹೋಲಿಸಿದರೆ ಈ 40 ರೂ.ದೊಡ್ಡ ಮೊತ್ತವೇನಲ್ಲ. ಆದರೆ ನ್ಯಾಯ ಪಡೆಯಲೇಬೇಕೆಂಬ ಛಲ ಹೊಂದಿದ್ದ ಲೇಖರಾಜ್ ಖರ್ಚಿನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಹಿಮಾಚಲ ಪ್ರದೇಶ ವಸತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಖರಾಜ್ ಮನೆಯೊಂದನ್ನು ಖರೀದಿಸಿದ್ದರು. 2014ರಲ್ಲಿ ನಿರ್ವಹಣೆ ಶುಲ್ಕವನ್ನು ಪಾವತಿಸದ್ದಕ್ಕಾಗಿ ಪ್ರಾಧಿಕಾರವು 848 ರೂ.ಗಳ ದಂಡವನ್ನು ವಿಧಿಸಿತ್ತು. ದಂಡ ಪಾವತಿಸದಿದ್ದರೆ ನೀರು ಪೂರೈಕೆ ಮತ್ತು ಒಳಚರಂಡಿ ಸಂಪರ್ಕದಂತಹ ಮೂಲಸೌಲಭ್ಯಗಳನ್ನು ಕಡಿತಗೊಳಿಸುವುದಾಗಿ ಅದು ಲೇಖರಾಜ್ಗೆ ಬೆದರಿಕೆಯೊಡ್ಡಿತ್ತು. ನಿಯಮದಂತೆ ಲೇಖರಾಜ್ಗೆ 808 ರೂ.ಗಳ ದಂಡವನ್ನು ವಿಧಿಸಬೇಕಿದ್ದರೂ ಪ್ರಾಧಿಕಾರವು ಹೆಚ್ಚುವರಿಯಾಗಿ 40 ರೂ.ಗಳನ್ನು ವಸೂಲು ಮಾಡಿತ್ತು.
ಇದನ್ನು ಪ್ರಶ್ನಿಸಿ ಲೇಖರಾಜ್ ಉನಾದಲ್ಲಿಯ ಜಿಲ್ಲಾ ಗ್ರಾಹಕ ವೇದಿಕೆಯ ಮೆಟ್ಟಿಲು ಹತ್ತಿದ್ದರು. ಅಲ್ಲಿ 2016ರಲ್ಲಿ ಅವರ ದೂರು ತಿರಸ್ಕೃತಗೊಂಡಿತ್ತು. ಇದರ ವಿರುದ್ಧ ಅವರು ರಾಜ್ಯ ಗ್ರಾಹಕ ವೇದಿಕೆಯಲ್ಲಿ ಮೇಲ್ಮನವಿ ಸಲ್ಲಿಸಿದ್ದರಾದರೂ ಅಲ್ಲಿಯೂ ಅವರಿಗೆ ಸೋಲುಂಟಾಗಿತ್ತು. ಇಷ್ಟಾದರೂ ಛಲ ಬಿಡದ ಲೇಖರಾಜ್ ಎನ್ಸಿಡಿಆರ್ಸಿಯ ಮೊರೆ ಹೋಗಿದ್ದರು.
ವಿಚಾರಣೆ ಸಂದರ್ಭ ಲೇಖರಾಜ್ಗೆ ತಾನು 40 ರೂ.ಅಧಿಕ ದಂಡ ವಿಧಿಸಿದ್ದನ್ನು ಸಮರ್ಥಿಸಿಕೊಳ್ಳುವಲ್ಲಿ ಪ್ರಾಧಿಕಾರವು ವಿಫಲಗೊಂಡಿತ್ತು. 40 ರೂ.ಗಳನ್ನು ಅವರಿಗೆ ಮರಳಿಸುವಂತೆ ಮತ್ತು ಪರಿಹಾರವಾಗಿ 5,000 ರೂ.ಗಳನ್ನು ನಾಲ್ಕು ವಾರಗಳಲ್ಲಿ ಪಾವತಿಸುವಂತೆ ಎನ್ಸಿಡಿಆರ್ಸಿ ಇದೀಗ ಪ್ರಾಧಿಕಾರಕ್ಕೆ ಆದೇಶ ಹೊರಡಿಸಿದೆ.







