ಬಾಯಿಯಲ್ಲಿ ಲಾಲಾರಸ ಉತ್ಪತ್ತಿಯಾಗದಿರುವುದು ಸಮಸ್ಯೆಯೇ....?

ನಮ್ಮ ಬಾಯಿಯಲ್ಲಿ ಉತ್ಪತ್ತಿಯಾಗುವ ಲಾಲಾರಸ ಅಥವಾ ಜೊಲ್ಲು ನಾವು ಸೇವಿಸುವ ಆಹಾರ ಜೀರ್ಣಗೊಳ್ಳಲು ನೆರವಾಗುತ್ತದೆ. ಅದು ನಮ್ಮ ಬಾಯಿಯನ್ನು ಸ್ವಚ್ಛವಾಗಿರಿಸುವ ಜೊತೆಗೆ ಬಾಯಿಯಲ್ಲಿ ಸ್ವಲ್ಪ ತೇವವನ್ನೂ ಕಾಯ್ದುಕೊಳ್ಳುತ್ತದೆ. ಬೂಸ್ಟು ಮತ್ತು ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಲೂ ಈ ಲಾಲಾರಸ ನೆರವಾಗುತ್ತೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.
ನಮ್ಮ ಬಾಯಿ ಸಾಕಷ್ಟು ಲಾಲಾರಸವನ್ನು ಉತ್ಪಾದಿಸಲು ವಿಫಲಗೊಂಡರೆ ಅದು ಒಳಗುತ್ತದೆ ಮತ್ತು ಬ್ಯಾಕ್ಟೀರಿಯಾಗಳು ಬಾಯಿಯಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿಕೊಳ್ಳುತ್ತವೆ. ಬಾಯಿ ಒಣಗಿರುವ ಸ್ಥಿತಿಯನ್ನು ‘ಝೆರೋಸ್ಟೋಮಿಯಾ’ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಅಂಶಗಳು ಇಲ್ಲಿವೆ.......
ನಮ್ಮ ಬಾಯಿ ಒಣಗುವುದೇಕೆ? ಮಧುಮೇಹ, ಕೆಪ್ಪಟ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಕೀಲೂತ, ರಕ್ತಹೀನತೆ ಮತ್ತು ಅಲ್ಝಿಮರ್ ಕಾಯಿಲೆಯಂತಹ ಸ್ಥಿತಿಗಳು ಬಾಯಿಯನ್ನು ಒಣಗಿಸುತ್ತವೆ.
ಕೆಲವು ಔಷಧಿಗಳೂ ಲಾಲಾರಸ ಉತ್ಪತ್ತಿಯನ್ನು ತಡೆಯುತ್ತವೆ. ಅಸ್ತಮಾ, ವಾಕರಿಕೆ, ಅತಿಸಾರ, ಅಧಿಕ ರಕ್ತದೊತ್ತಡ, ಅಪಸ್ಮಾರ, ಮೊಡವೆ, ಬೊಜ್ಜು, ಶೀತ, ಉದ್ವೇಗ, ನೋವು, ಖಿನ್ನತೆ ಮತ್ತು ಅಲರ್ಜಿಗಳ ಚಿಕಿತ್ಸೆಗೆ ಬಳಸುವ ಕೆಲವು ಮಾತ್ರೆಗಳು ಬಾಯಿ ಒಣಗುವುದಕ್ಕೆ ಕಾರಣವಾಗಬಹುದು.
ವಿಕಿರಣ ಚಿಕಿತ್ಸೆ ಮತ್ತು ಕೆಮೊಥೆರಪಿಗಳು ಸಹ ಲಾಲಾರಸ ಉತ್ಪತ್ತಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ. ಜೊಲ್ಲುಗ್ರಂಥಿಗಳ ಮೇಲೆ ಪರಿಣಾಮವನ್ನುಂಟು ಮಾಡುವ ವೈದ್ಯಕೀಯ ಚಿಕಿತ್ಸೆಗಳು ಬಾಯೊಣಗಿಸುತ್ತವೆ.
ಅಪಘಾತದಿಂದ ಅಥವಾ ಶಸ್ತ್ರಚಿಕಿತ್ಸೆಯಿಂದ ನರಗಳಿಗೆ ಹಾನಿಯಾದಾಗಲೂ ಲಾಲಾರಸ ಉತ್ಪತ್ತಿಗೆ ತೊಂದರೆಯಾಗುತ್ತದೆ.
ನಾವು ಸಾಕಷ್ಟು ನೀರನ್ನು ಕುಡಿಯದಿದ್ದರೆ ಅಥವಾ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದ್ದರೂ ಬಾಯೊಣಗುತ್ತದೆ.
ಅತಿಯಾದ ಧೂಮಪಾನಿಗಳಲ್ಲಿ ಬಾಯೊಣಗುವಿಕೆ ಸಾಮಾನ್ಯ ಅಡ್ಡಪರಿಣಾಮವಾಗಿದೆ. ಬಾಯಿಯಿಂದ ಉಸಿರಾಡಿದರೂ ಇದೇ ಆಗುತ್ತದೆ.
ಬಾಯಿ ಒಣಗಿದಾಗ ಏನಾಗುತ್ತದೆ? ಪದೇ ಪದೇ ಬಾಯಾರಿಕೆ ಅನ್ನಿಸುತ್ತದೆ. ಅದು ತುಟಿಗಳಲ್ಲಿ ಬಿರುಕುಗಳಾಗುವ ಜೊತೆಗೆ ಬಾಯಿಯೊಳಗೆ ಹುಣ್ಣುಗಳೂ ಆಗಬಹುದು. ಲಾಲಾರಸ ತೀರ ಕಡಿಮೆ ಪ್ರಮಾಣದಲ್ಲಿದ್ದರೆ ಬಾಯಿ ದುರ್ವಾಸನೆಯನ್ನೂ ಬೀರುತ್ತದೆ. ಹೀಗಾಗಿ ಆಗಾಗ್ಗೆ ಬಾಯಿ ಒಣಗುತ್ತಿದೆ ಎಂದು ನಿಮಗನ್ನಿಸಿದರೆ ವೈದ್ಯರನ್ನು ಭೇಟಿ ಯಾಗುವದು ಒಳ್ಳೆಯದು.







