ಮಠ-ಮಂದಿರಗಳಲ್ಲಿ ಇಫ್ತಾರ್ ಆಯೋಜಿಸಿದರೆ ರಕ್ತ ಹರಿಸುತ್ತೇವೆ: ಪ್ರಮೋದ್ ಮುತಾಲಿಕ್

ಬೆಂಗಳೂರು, ಜು.2: ಇನ್ನು ಮುಂದೆ ಮಠ-ಮಂದಿರಗಳಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದರೆ ರಕ್ತ ಹರಿಸುತ್ತೇವೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ರವಿವಾರ ಇಲ್ಲಿನ ಆನಂದರಾವ್ ವೃತ್ತದಲ್ಲಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಹಿಂದೂ-ಮುಸ್ಲಿಮರ ನಡುವಿನ ಸೌಹಾರ್ದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸೌಹಾರ್ದ ನಡೆಸಿದ ಸ್ಥಳ ಯಾವುದು. ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣ ಮಠದಲ್ಲಿ ಗೋ ಹಂತಕರಿಗೆ ಪ್ರವೇಶ ನೀಡಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಹಿಂದೂ ಸಮಾಜಕ್ಕೆ ತಪ್ಪು ಸಂದೇಶ ನೀಡಿದ್ದಾರೆಂದು ಪೇಜಾವರ ಶ್ರೀಗಳ ವಿರುದ್ಧ ಕಿಡಿಕಾರಿದರು.
ಮುಸ್ಲಿಮರಿಗೆ ಪವಿತ್ರ ಎನಿಸಿಕೊಳ್ಳುವ ಮಸೀದಿಯೊಳಗೆ ಹಿಂದೂಗಳಿಗೆ ಪ್ರವೇಶವಿಲ್ಲ. ಹಿಂದೂಗಳಿಗೂ ಪವಿತ್ರ ಎನಿಸಿಕೊಂಡಿರುವ ಮಠ ಮಂದಿರಗಳಿಗೆ ಗೋಹಂತಕರನ್ನು ಬಿಟ್ಟುಕೊಂಡಿದ್ದು ಸರಿಯಲ್ಲ. ಇನ್ನು ಮುಂದೆ ಮಠ ಮಂದಿರಗಳಲ್ಲಿ ಇಫ್ತಾರ್ ಕೂಟ ಆಯೋಜಿಸಿದರೆ ರಕ್ತ ಹರಿಸಿಯಾದರೂ ಅದನ್ನು ನಿಲ್ಲಿಸುತ್ತೇವೆ ಎಂದು ಹೇಳಿದರು.
ಸೌಹಾರ್ದವನ್ನು ಮುಸ್ಲಿಮರಿಂದ ಅಪೇಕ್ಷಿಸಬೇಕು. ಹಿಂದೂಗಳಿಗೆ ಮಾತ್ರ ಸೌಹಾರ್ದ ಪಾಠ ಹೇಳುವುದನ್ನು ಬಿಟ್ಟು ಗೋಹಂತಕ, ಭಯೋತ್ಪಾದಕರಿಗೆ, ಅತ್ಯಾಚಾರಿಗಳಿಗೆ ಹೇಳಲಿ. ಗೋ ಹತ್ಯೆ ಮತ್ತು ಗೋ ಭಕ್ಷಣೆ ಬಿಟ್ಟರೆ ಮಾತ್ರ ದೇಶದಲ್ಲಿ ಹಿಂದೂ-ಮುಸ್ಲಿಮರು ಸಹೋದರರಾಗಲು ಸಾಧ್ಯ ಎಂದರು.
ನಿರ್ಲಜ್ಜ ರಾಜಕಾರಣಿಗಳಿಂದ ಸೌಹಾರ್ದ ಪಾಠವನ್ನು ಕಲಿಯಬೇಕಿಲ್ಲ. ಸರಕಾರಕ್ಕೆ ಕಿಂಚಿತ್ತಾದರೂ ಮಾನ-ಮರ್ಯಾದೆ ಇದ್ದರೆ ಮೈಸೂರಿನಲ್ಲಿ ಬಹಿರಂಗವಾಗಿ ಗೋಮಾಂಸ ಭಕ್ಷಣೆ ಮಾಡಿದವರನ್ನು ಬಂಧಿಸಲಿ ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ಗೋ ಹಂತಕರ ಪ್ರವೇಶದಿಂದ ಅಪವಿತ್ರವಾಗಿರುವ ಮಠವನ್ನು ಶುದ್ಧೀಕರಣ ಮಾಡಬೇಕು. ಮಠದಲ್ಲಿ ಇಫ್ತಾರ್‌ಕೂಟ ಆಯೋಜಿಸಿದ್ದಕ್ಕೆ ಸಮಸ್ತ ಹಿಂದೂಗಳ ಕ್ಷಮೆ ಕೋರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಮೇಶ್ ಶರ್ಮಾ ಗುರೂಜಿ, ನಗರ ಅಧ್ಯಕ್ಷ ಮೋಹನ್‌ಗೌಡ, ವಿನಯ್‌ಗೌಡ ಸೇರಿದಂತೆ ಇತರರು ಇದ್ದರು.







