ರೈಲ್ವೆ ಸಿಬ್ಬಂದಿಗಳಿಗೆ ಶೀಘ್ರ ನೂತನ ಸಮವಸ್ತ್ರ

ಹೊಸದಿಲ್ಲಿ,ಜು.2: ಪ್ರಯಾಣಿಕರೊಂದಿಗೆ ವ್ಯವಹರಿಸುವ ರೈಲ್ವೆ ಸಿಬ್ಬಂದಿಗಳು ಶೀಘ್ರವೇ ಖ್ಯಾತ ಡಿಸೈನರ್ ರಿತು ಬೆರಿ ಅವರು ವಿನ್ಯಾಸಗೊಳಿಸಿರುವ ನೂತನ ಸಮವಸ್ತ್ರದಲ್ಲಿ ಮಿಂಚಲಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ಹೊಳೆಯುವ ಜಾಕೆಟ್‌ಗಳು ಹಾಗೂ ಕಪ್ಪು ಮತ್ತು ಹಳದಿ ಟಿ-ಶರ್ಟ್‌ಗಳನ್ನೊಳಗೊಂಡ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರೈಲುಗಳಲ್ಲಿಯ ಟಿಟಿಇ, ಗಾರ್ಡ್, ಡ್ರೈವರ್ ಮತ್ತು ಕೇಟರಿಂಗ್ ಸಿಬ್ಬಂದಿಗಳು ಹಾಗೂ ಸ್ಟೇಷನ್ ಮಾಸ್ಟರ್ ಸೇರಿದಂತೆ ಸುಮಾರು ಐದು ಲಕ್ಷ ರೈಲ್ವೆ ಸಿಬ್ಬಂದಿಗಳಿಗೆ ರೈಲ್ವೆಯ ಲಾಂಛನವಿರುವ ನೂತನ ಸಮವಸ್ತ್ರದ ಭಾಗ್ಯ ಒದಗಲಿದೆ.
ಸದ್ಯ ಟಿಟಿಇ, ಸ್ಟೇಷನ್ ಮಾಸ್ಟರ್ ಮತ್ತು ಗಾರ್ಡ್‌ಗಳು ಸೇರಿದಂತೆ ರೈಲ್ವೆ ಸಿಬ್ಬಂದಿಗಳು ಬಹು ಹಿಂದೆ ವಿನ್ಯಾಸಗೊಳಿಸಿದ್ದ ಸಮವಸ್ತ್ರಗಳನ್ನೇ ಧರಿಸುತ್ತಿದ್ದಾರೆ. ಕಾರ್ಯಾಗಾರಗಳು ಮತ್ತು ಉತ್ಪಾದನಾ ಘಟಕಗಳ ತಾಂತ್ರಿಕ ಸಿಬ್ಬಂದಿಗಳಿಗೂ ನೂತನ ಸಮವಸ್ತ್ರ ದೊರೆಯಲಿದೆ.
ರಿತು ಬೆರಿ ಸಲ್ಲಿಸಿರುವ ನೂತನ ಸಮವಸ್ತ್ರ ವಿನ್ಯಾಸಗಳನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರವೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು. ಆರಂಭದಲ್ಲಿ ಸ್ವರ್ಣ ಯೋಜನೆಯ ಭಾಗವಾಗಿ ನೂತನ ಸಮವಸ್ತ್ರಗಳನ್ನು ಕೆಲವು ರಾಜಧಾನಿ ಮತ್ತು ಶತಾಬ್ದಿ ರೈಲುಗಳಲ್ಲಿ ಜಾರಿಗೊಳಿಸಲಾಗುವುದು ಮತ್ತು ಬಳಿಕ ಇತರ ರೈಲುಗಳಿಗೆ ವಿಸ್ತರಿಸಲಾಗುವುದು. ಪ್ರಯಾಣಿಕರಿಗೆ ಅತ್ಯುತ್ತಮ ಪ್ರಯಾಣದ ಅನುಭವ ನೀಡಲು ರಾಜಧಾನಿ ಮತ್ತು ಶತಾಬ್ದಿ ರೈಲುಗಳಲ್ಲಿ ಬದಲಾವಣೆಗಳನ್ನು ತರಲು ಸ್ವರ್ಣ ಯೋಜನೆಯನ್ನು ರೂಪಿಸಲಾಗಿದೆ.







