ಎಎಪಿಯಿಂದ ಮೀರಾ ಕುಮಾರ್‌ಗೆ ಬೆಂಬಲ ?

ಹೊಸದಿಲ್ಲಿ, ಜು. 1: ಎನ್‌ಡಿಎ ರಾಷ್ಟ್ರಪತಿ ಹುದ್ದೆ ಅಭ್ಯರ್ಥಿಯಾಗಿರುವ ರಾಮ್‌ನಾಥ್ ಕೋವಿಂದ್‌ಗೆ ಬೆಂಬಲ ನಿರಾಕರಿಸಿರುವ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಬೆಂಬಲಿತ ವಿರೋಧ ಪಕ್ಷಗಳ ರಾಷ್ಟ್ರಪತಿ ಹುದ್ದೆ ಅಭ್ಯರ್ಥಿ ಮೀರಾ ಕುಮಾರ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ.
ಈ ನಿರ್ಧಾರಕ್ಕೆ ಬರುವ ಮುನ್ನ ಆಮ್ ಆದ್ಮಿ ಪಕ್ಷ ಎಡಪಕ್ಷಗಳು ಹಾಗೂ ತೃಣಮೂಲ ಕಾಂಗ್ರೆಸ್‌ನೊಂದಿಗೆ ಚರ್ಚೆ ನಡೆಸಿದೆ. ಮೋದಿ ಅಭ್ಯರ್ಥಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ನಾವು ಮೀರಾ ಕುಮಾರ್‌ಗೆ ಬೆಂಬಲಿಸುವ ಸಾಧ್ಯತೆ ಇದೆ. ಆದರೆ, ಇದುವರೆಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಎಎಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಆದರೂ, ಮೀರಾ ಕುಮಾರ್ ಅವರ ಅಭ್ಯರ್ಥನ ಘೋಷಿಸಲು ವಿರೋಧ ಪಕ್ಷಗಳೊಂದಿಗೆ ನಡೆಸಿದ ಚರ್ಚೆಗೆ ಕಾಂಗ್ರೆಸ್ ಎಎಪಿಗೆ ಆಹ್ವಾನ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳುವ ಬಗ್ಗೆ ಎಎಪಿಗೆ ಸಂತೋಷವಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್‌ನಲ್ಲಿ ಎಎಪಿ ಪ್ರಾಥಮಿಕ ವಿರೋಧ ಪಕ್ಷ ಎಂದು ಅವರು ಹೇಳಿದರು.
2013ರಲ್ಲಿ ನಡೆದ ಹೊಸದಿಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಎಎಪಿ ಕಾಂಗ್ರೆಸ್ ವಿರುದ್ಧ ವಿಜಯ ಗಳಿಸಿತ್ತು. ಇದರೊಂದಿಗೆ 15 ವರ್ಷಗಳ ಕಾಂಗ್ರೆಸ್‌ನ ಅಧಿಕಾರ ಅಂತ್ಯಗೊಂಡಿತ್ತು.
ದಿಲ್ಲಿಯಲ್ಲಿ ಆಡಳಿತ ಪಕ್ಷ ಹಾಗೂ ಪಂಜಾಬ್‌ನಲ್ಲಿ ವಿರೋಧ ಪಕ್ಷವಾಗಿರುವ ಎಎಪಿ ಲೋಕಸಭೆಯಲ್ಲಿ ನಾಲ್ವರು ಸಂಸದರು, 85 ಶಾಸಕರನ್ನು ಹೊಂದಿದೆ.







