ಶೀಘ್ರದಲ್ಲಿ ರೈಲುಗಳಲ್ಲಿ ಎಕಾನಮಿ ಎಸಿ ಕೋಚ್

ಹೊಸದಿಲ್ಲಿ, ಜು. 2: ರೈಲು ಪ್ರಯಾಣಿಕರಿಗೆ ಶೀಘ್ರದಲ್ಲಿ ಸಾಮಾನ್ಯ 3ಎಸಿ ದರಕ್ಕಿಂತ ಕಡಿಮೆ ದರದಲ್ಲಿ ಇಕಾನಮಿ ಎಸಿ ಕೋಚ್‌ನ ನೂತನ ಕ್ಲಾಸ್‌ನಲ್ಲಿ ಪ್ರಯಾಣಿಸುವ ಭಾಗ್ಯ ಒದಗಿ ಬರಲಿದೆ.
ಎಸಿ-3, ಎಸಿ-2, ಎಸಿ-1 ಕ್ಲಾಸ್ ಹೊರತುಪಡಿಸಿ ಮೂರು ಶ್ರೇಣಿಯ ಇಕಾನಮಿ ಎಸಿ ಹೊಂದಿರುವ ಪೂರ್ಣ ಹವಾನಿಯಂತ್ರಿತ ರೈಲು ಓಡಿಸುವುದು ಈ ಪ್ರಸ್ತಾವದಲ್ಲಿದೆ. ಮುಂದೆ ಅಟೋಮ್ಯಾಟಿಕ್ ಬಾಗಿಲುಗಳನ್ನು ಕೂಡ ಅಳವಡಿಸುವ ಚಿಂತನೆ ಇದೆ.
ಉಷ್ಣಾಂಶ 24-25 ಡಿಗ್ರಿ ಸೆಲ್ಸಿಯಸ್ ಇರುವುದರಿಂದ ಎಸಿ ಕೋಚ್‌ಗಳಂತೆ ಇಕಾನಮಿ ಕೋಚ್‌ಗಳಲ್ಲಿ ಕೂಡ ಪ್ರಯಾಣಿಕರಿಗೆ ಹೊದಿಕೆಗಳ ಅವಶ್ಯಕತೆ ಇರುವುದಿಲ್ಲ.
ಪ್ರಸ್ತುತ ಮೈಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸ್ಲೀಪರ್, 3ಎಸಿ, 2ಎಸಿ, 1 ಎಸಿ ಕ್ಲಾಸ್‌ಗಳಿವೆ. ರಾಜಧಾನಿ ಹಾಗೂ ಶತಾಬ್ದಿ ರೈಲುಗಳಲ್ಲಿ ಸಂಪೂರ್ಣ ಎಸಿ ಇದೆ. ಹಮ್‌ಸಫರ್ ಪ್ಲಸ್ ಹಾಗೂ ತೇಜಸ್ ಪ್ಲಸ್ ರೈಲುಗಳಲ್ಲಿ ಇತ್ತೀಚೆಗೆ ಸಂಪೂರ್ಣ ಎಸಿ ಪರಿಚಯಿಸಲಾಗಿದೆ.
ಎಸಿ ಮೂಲಕ ಹೆಚ್ಚಿನ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಒದಗಿಸುವ ಉದ್ದೇಶದಿಂದ ಆಯ್ದ ಮಾರ್ಗಗಳಲ್ಲಿ ಎಸಿ ರೈಲುಗಳನ್ನು ಪರಿಚಯಿಸಲು ರೈಲ್ವೇ ಚಿಂತಿಸಿದೆ.
ಇತರ ಎಸಿ ಕ್ಲಾಸ್‌ಗಳಂತೆ ಇಲ್ಲಿ ಯಾವುದೇ ಚಳಿಯ ಅನುಭವ ಬಾರದು. ಉಷ್ಣಾಂಶವನ್ನು 24-25ಕ್ಕೆ ನಿಗದಿಗೊಳಿಸಲಾಗುತ್ತದೆ. ಹೊರಗಿನ ಉಷ್ಣಾಂಶ ತಗುಲದೆ ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸುವಂತೆ ಮಾಡುವುದು ನಮ್ಮ ಉದ್ದೇಶ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







