ಸೆಪ್ಟಂಬರ್‌ನಿಂದ ಸರಕಾರಿ ಕೇಂದ್ರಗಳಲ್ಲಿ ಮಾತ್ರ ಆಧಾರ್ ಕಾರ್ಡ್ ದಾಖಲಾತಿ

ಹೊಸದಿಲ್ಲಿ, ಜು. 2: ಆಧಾರ್ ಕಾರ್ಡ್ ದಾಖಲಾತಿಯನ್ನು ಸರಕಾರಿ ಅಥವಾ ನಗರಾಡಳಿತ ಕಚೇರಿ ಆವರಣಕ್ಕೆ ವರ್ಗಾಯಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಯುಐಡಿಎಐ ರಾಜ್ಯ ಸರಕಾರಗಳಿಗೆ ಸೂಚಿಸಿದೆ.
ರಾಷ್ಟ್ರಾದ್ಯಂತ ಸುಮಾರು 25 ಸಾವಿರ ಸಕ್ರಿಯ ದಾಖಲಾತಿ ಕೇಂದ್ರಗಳಿದ್ದು, ಇದನ್ನು ಸರಕಾರದ ಮೇಲ್ವಿಚಾರಣೆ ಅಡಿಯಲ್ಲಿ ತರಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ದಾಖಲಾತಿ ಹಾಗೂ ನವೀಕರಣವನ್ನು ಸರಕಾರ ಸೂಕ್ಷ್ಮವಾಗಿ ಅವಲೋಕಿಸಲಿದ್ದು, ಇದು ಖಾಸಗಿ ನಿರ್ವಹಣೆದಾರರು ಮಿತಿ ಮೀರಿ ಶುಲ್ಕ ವಸೂಲು ಮಾಡುವುದನ್ನು ತಡೆಯಲು ನೆರವಾಗಲಿದೆ.
ಜು. 31ರ ಒಳಗೆ ಸರಕಾರಿ ಕಚೇರಿ ಆವರಣದಲ್ಲಿ ದಾಖಲಾತಿ ಹಾಗೂ ನವೀಕರಣ ಚಟುವಟಿಕೆ ಕೇಂದ್ರಗಳನ್ನು ಗುರುತಿಸಿ ಎಂದು ಯುಐಡಿಎಐ ಕಾರ್ಯನಿರ್ವಹಣಾ ಅಧಿಕಾರಿ ಅಜಯ್ ಭೂಷಣ್ ರಾಜ್ಯ ಸರಕಾರಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.
ಜನರು ದಾಖಲಾತಿ ಕೇಂದ್ರಗಳನ್ನು ಪತ್ತೆಹಚ್ಚಲು ಕಷ್ಟಪಡುತ್ತಿದ್ದಾರೆ. ಹಲವು ಬಾರಿ ಅವರು ನಮಗೆ ದೂರು ನೀಡಿದ್ದಾರೆ. ಕೆಲವರು ಕೇಂದ್ರಕ್ಕೆ ಹೋಗುತ್ತಾರೆ. ಅದು ಮುಚ್ಚಿರುವುದನ್ನು ನೋಡಿ ಹಿಂದೆ ಬರುತ್ತಾರೆ. ಕೇಂದ್ರ ಸಿಕ್ಕರೂ ದಾಖಲಾತಿ ಸಂದರ್ಭ ಮಿತಿ ಮೀರಿದ ಶುಲ್ಕ ವಸೂಲಿ ಮಾಡಿದ ಬಗ್ಗೆ ದೂರು ನೀಡುತ್ತಾರೆ. ಆದುದರಿಂದ ಖಾಸಗಿ ದಾಖಲಾತಿ ಕೇಂದ್ರಗಳು ಸರಕಾರಿ ಕಚೇರಿಗಳ ಮೇಲ್ವಿಚಾರಣೆಯಲ್ಲಿ ಇರಬೇಕು ಅಥವಾ ಮುಚ್ಚಬೇಕು ಎಂದು ಪಾಂಡೆ ಹೇಳಿದ್ದಾರೆ.
ಖಾಸಗಿ ಸ್ಥಳದಲ್ಲಿರುವ ದಾಖಲಾತಿ ಕೇಂದ್ರಗಳನ್ನು ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪರಿಷತ್ ಕಚೇರಿ, ನಗರಾಡಳಿತ ಕಚೇರಿ, ಬ್ಯಾಂಕ್, ಬ್ಲಾಕ್ ಕಚೇರಿ, ತಾಲೂಕು ಕಚೇರಿ ಅಥವಾ ಇತರ ವಿತರಣಾ ಕಚೇರಿಯಂತಹ ಸರಕಾರಿ ಕಚೇರಿಗಳ ಆವರಣಕ್ಕೆ ವರ್ಗಾಯಿಸಬೇಕು. ಇದರಿಂದ ನಾಗರಿಕರಿಗೆ ಸಹಾಯಕವಾಗಲಿದೆ ಎಂದು ಪಾಂಡೆ ತಿಳಿಸಿದ್ದಾರೆ.
ಕೇಂದ್ರ ಸರಕಾರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೋಡಿಸಲು ಕೆಲವು ದಿನಗಳ ಹಿಂದೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ನಡೆ ಮುಖ್ಯವಾದುದು.







