ಪಾಕ್ ಪ್ರಜೆಗಳಿಗೆ ನೆರವು ಆರೋಪ: ವೈದ್ಯಗೆ ಹೈಕೋರ್ಟ್ ಜಾಮೀನು

ಬೆಂಗಳೂರು, ಜು.2: ನಕಲಿ ದಾಖಲೆಗಳಿಗೆ ಸಹಿ ಮಾಡಿಕೊಡುವ ಮೂಲಕ ಆಧಾರ್ ಕಾರ್ಡ್‌ಗಳನ್ನು ಪಡೆಯಲು ಪಾಕ್ ಪ್ರಜೆಗಳಿಗೆ ನೆರವಾದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಜಯನಗರ ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯೆ ಸಿ.ಎಸ್.ನಾಗಲಕ್ಷಮ್ಮ ಅವರಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
2017ರ ಜನವರಿ 2ನೇ ವಾರದಲ್ಲಿ ಆಸ್ಪತ್ರೆ ಬಳಿ ಹೋಗಿದ್ದ ಆರೋಪಿ ಸಿಹಾಬ್, ಆಧಾರ್ ಕಾರ್ಡ್ ಪಡೆಯಲು ಗೆಜೆಟೆಡ್ ಅಧಿಕಾರಿಯೊಬ್ಬರು ನಮ್ಮ ವಿಳಾಸದ ದಾಖಲೆಗಳನ್ನು ಪರಿಶೀಲಿಸಬೇಕು. ಗೆಜೆಟೆಡ್ ಅಧಿಕಾರ ಹೊಂದಿರುವ ವೈದ್ಯರಿದ್ದರೆ ಸಹಿ ಮಾಡಿಸಿಕೊಡಿ ಎಂದು ಜಯನಗರ ಆಸ್ಪತ್ರೆಯ ಕಚೇರಿ ಸಹಾಯಕ ಟಿ.ಎಚ್.ರವಿಕುಮಾರ್ ಅವರನ್ನು ಕೋರಿದ್ದರು.
ದಾಖಲೆಗಳನ್ನು ಪಡೆದ ಅವರು, ಅವುಗಳಿಗೆ ನಾಗಲಕ್ಷಮ್ಮ ಅವರ ಸಹಿ ಹಾಕಿಸಿ ಕೊಟ್ಟಿದ್ದರು. ಆ ನಂತರ ಕದಿರೇನಹಳ್ಳಿ ಆಧಾರ್ ಕೇಂದ್ರಕ್ಕೆ ತೆರಳಿದ್ದ ಸಿಹಾಬ್, ಆ ದಾಖಲೆಗಳನ್ನು ಸಲ್ಲಿಸಿ ಪತ್ನಿ ಸಮೀರಾ, ಸಂಬಂಧಿಗಳಾದ ಝೈನಬ್ ಹಾಗೂ ಖಾಸಿಫ್(ಮೂವರೂ ಪಾಕಿಸ್ತಾನದವರು) ಅವರಿಗೆ ಆಧಾರ್ ಕಾರ್ಡ್ ಮಾಡಿಸಿದ್ದರು ಎಂಬ ಆರೋಪದಡಿ ಪ್ರಕರಣ ದಾಖಲಿಸಿದ್ದರು.





