ಭಾರತದ ಬೇಜವಾಬ್ದಾರಿಯಿಂದ ಸಿಕ್ಕಿಂ ಗಡಿಯಲ್ಲಿ ಘರ್ಷಣೆ: ಚೀನಾ ವಾರ್ತಾ ಸಂಸ್ಥೆ
.jpg)
ಬೀಜಿಂಗ್, ಜು. 2: ತನ್ನ ಸ್ವಂತ ಜಾಗದಲ್ಲಿ ನಿರ್ಮಾಣ ಕಾರ್ಯ ನಡೆಸುವುದರಿಂದ ಚೀನಾವನ್ನು ತಡೆಯುವ ಮೂಲಕ ಭಾರತ ವಿವೇಚನಾರಹಿತವಾಗಿ ವರ್ತಿಸಿದೆ ಹಾಗೂ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಚೀನಾದ ಅಧಿಕೃತ ವಾರ್ತಾ ಸಂಸ್ಥೆ ಕ್ಸಿನುವಾ ರವಿವಾರ ಹೇಳಿದೆ.
ಭಾರತೀಯ ಪಡೆಗಳು ಡಾಂಗ್‌ಲಂಗ್ ಪ್ರದೇಶವನ್ನು ಪ್ರವೇಶಿಸಿದೆ ಹಾಗೂ ಆ ಮೂಲಕ ತನ್ನ ಸಾರ್ವಭೌಮತೆಯನ್ನು ಉಲ್ಲಂಘಿಸಿದೆ ಎಂಬ ತನ್ನ ಹೇಳಿಕೆಗೆ ಪೂರಕವಾಗಿ ಚೀನಾ ಕಳೆದ ವಾರ ಚಿತ್ರಗಳು ಮತ್ತು ಭೂಪಟಗಳನ್ನು ಬಿಡುಗಡೆ ಮಾಡಿತ್ತು.
ಡಾಂಗ್‌ಲಂಗ್ ಪ್ರದೇಶ ತಮ್ಮದೆಂದು ಚೀನಾ ಮತ್ತು ಭೂತಾನ್‌ಗಳೂ ಹೇಳಿಕೊಳ್ಳುತ್ತಿವೆ.
‘‘ಚೀನಾದ ಚಟುವಟಿಕೆಗಳು ‘ಗಂಭೀರ ಭದ್ರತಾ ಪರಿಣಾಮ’ವನ್ನು ಉಂಟು ಮಾಡಿವೆ ಎಂದು ಭಾರತ ಹೇಳಿಕೊಂಡಿದೆ. ಅದನ್ನು ಒಪ್ಪಲು ಸಾಧ್ಯವಿಲ್ಲ. ಚೀನಾ ತನ್ನದೇ ನೆಲದಲ್ಲಿ ಇತರರ ಮೇಲೆ ಹೇಗೆ ಪರಿಣಾಮ ಬೀರಲು ಸಾಧ್ಯ? ವಾಸ್ತವವಾಗಿ, ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದ್ದು ಮತ್ತು ಚೀನಾದ ನಿರ್ಮಾಣ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ನಡೆಸಿದ್ದು ಭಾರತ’’ ಎಂದು ಕ್ಸಿನುವಾ ಹೇಳಿದೆ.
ಕ್ಸಿನುವಾ ವಾರ್ತಾ ಸಂಸ್ಥೆಯ ಒಡೆತನ ಮತ್ತು ನಿಯಂತ್ರಣವನ್ನು ಚೀನಾ ಸರಕಾರ ಹೊಂದಿದ್ದು, ಅದರಲ್ಲಿ ಪ್ರಕಟಗೊಳ್ಳುವ ಹೇಳಿಕೆಗಳು ದೇಶದ ನಾಯಕತ್ವದ ಅಭಿಪ್ರಾಯವಾಗಿರುತ್ತದೆ.
ಚೀನಾದ ಆರೋಪಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿದೆ ಹಾಗೂ ಆಯಕಟ್ಟಿನ ಭಾರತ-ಚೀನಾ-ಭೂತಾನ್ ಗಡಿಗಳ ಸಂಗಮದಲ್ಲಿ ಚೀನಾ ರಸ್ತೆ ನಿರ್ಮಿಸುತ್ತಿರುವುದು ‘ಅತ್ಯಂತ ಕಳವಳಕಾರಿ’ ಬೆಳವಣಿಗೆಯಾಗಿದೆ ಎಂದಿದೆ.