ನೂತನ ವಿಶ್ವ ದಾಖಲೆ ಬರೆದ ಕ್ರಿಕೆಟ್ ಆಟಗಾರ್ತಿ
ಪುರುಷರನ್ನು ಹಿಂದಿಕ್ಕಿದ ಬೌಲರ್

ಹೊಸದಿಲ್ಲಿ, ಜು.2: ದಕ್ಷಿಣ ಆಫ್ರಿಕದ ಆಟಗಾರ್ತಿ ಡೇನ್ ವ್ಯಾನ್ ನೀಕೆರ್ಕ್ ಒಂದೂ ರನ್ ನೀಡದೇ ನಾಲ್ಕು ವಿಕೆಟ್‌ಗಳನ್ನು ಪಡೆದರು. ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ(ಪುರುಷರ, ಮಹಿಳೆಯರ ಕ್ರಿಕೆಟ್) ಮೊದಲ ಬಾರಿ ಬೌಲರ್‌ನಿಂದ ಈ ಸಾಧನೆ ಹೊರಹೊಮ್ಮಿದ್ದು, ಇದೊಂದು ನೂತನ ವಿಶ್ವ ದಾಖಲೆಯಾಗಿದೆ.
ಪುರುಷರ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯದ ರಿಚಿ ಬೆನಾಯ್ಡಿ 1959ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ಭಾರತ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ 3.4 ಓವರ್‌ಗಳಲ್ಲಿ ಒಂದೂ ರನ್ ನೀಡದೇ ಮೂರು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದರು. ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಎರಡು ಬಾರಿ ರನ್ ನೀಡದೆ 3 ವಿಕೆಟ್ ಪಡೆದ ಸಾಧನೆ ದಾಖಲಾಗಿತ್ತು.
ದಕ್ಷಿಣ ಆಫ್ರಿಕದ ನಾಯಕಿ ನೀಕೆರ್ಕ್ ವೆಸ್ಟ್‌ಇಂಡೀಸ್‌ನ ವಿರುದ್ಧ ರವಿವಾರ ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿ ನಡೆದ ಮಹಿಳೆಯರ ಐಸಿಸಿ ಮಹಿಳೆಯರ ವಿಶ್ವಕಪ್‌ನಲ್ಲಿ ಈ ವಿಶ್ವದಾಖಲೆ ನಿರ್ಮಿಸಿದರು.
ನೀಕೆರ್ಕ್(4-0) ಹಾಗೂ ಮರಿಝನ್ ಕಾಪ್(4-14) ದಾಳಿಗೆ ಸಿಲುಕಿದ್ದ ವೆಸ್ಟ್‌ಇಂಡೀಸ್ 25.2 ಓವರ್‌ಗಳಲ್ಲಿ ಕೇವಲ 48 ರನ್‌ಗೆ ಆಲೌಟಾಗಿತ್ತು. ಸುಲಭ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕ 6.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿ 10 ವಿಕೆಟ್‌ಗಳ ಜಯ ಸಾಧಿಸಿದೆ.
ನೀಕೆರ್ಕ್ ಸಾಧನೆಯನ್ನು ದಕ್ಷಿಣ ಆಫ್ರಿಕದ ಖ್ಯಾತ ಕ್ರಿಕೆಟಿಗ ಎಬಿಡಿವಿಲಿಯರ್ಸ್ ಟ್ವೀಟರ್‌ನಲ್ಲಿ ಶ್ಲಾಘಿಸಿದ್ದಾರೆ.







