ಭಾರತದ ವನಿತೆಯರಿಗೆ ಹ್ಯಾಟ್ರಿಕ್ ಜಯ: ಪಾಕ್‌ಗೆ ಹೀನಾಯ ಸೋಲು

ಡರ್ಬಿ, ಜು.2: ಇಲ್ಲಿ ನಡೆದ ಮಹಿಳೆಯರ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 95 ರನ್‌ಗಳ ಭರ್ಜರಿ ಜಯ ಗಳಿಸಿದೆ. ಗೆಲುವಿಗೆ 170 ರನ್‌ಗಳ ಸವಾಲನ್ನು ಪಡೆದ ಪಾಕಿಸ್ತಾನದ ವನಿತೆಯರ ತಂಡ 38.1 ಓವರ್‌ಗಳಲ್ಲಿ 74 ರನ್‌ಗಳಿಗೆ ಆಲೌಟಾಗಿದೆ. ಇದರೊಂದಿಗೆ ಭಾರತ ಹ್ಯಾಟ್ರಿಕ್ ಜಯ ದಾಖಲಿಸಿದೆ.
ಭಾರತದ ಏಕ್ತಾ ಬಿಷ್ತ್ 18ಕ್ಕೆ 5 ವಿಕೆಟ್ ಉಡಾಯಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಾಕ್‌ನ ಪರ ನಾಯಕಿ ಸನಾ ಮಿರ್ (29) ಮತ್ತು ನಹಿದಾ ಖಾನ್(23) ಮಾತ್ರ ಎರಡಂಕೆಯ ಸ್ಕೋರ್ ದಾಖಲಿಸಿದರು.
ಭಾರತ 169/9: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತದ ಮಹಿಳೆಯರಿಗೆ ಬ್ಯಾಟಿಂಗ್ ಸವಾಲಾಗಿತ್ತು. 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 169 ರನ್ ಮಾಡಲಷ್ಟೇ ಶಕ್ತರಾದರು. ಪಾಕಿಸ್ತಾನದ ನಾಶ್ರ ಸಂಧು (26ಕ್ಕೆ 4) ಮತ್ತು ಸಹದಿಯಾ ಯೂಸುಫ್(30ಕ್ಕೆ2) ದಾಳಿಯ ಮುಂದೆ ರನ್ ಗಳಿಸಲು ಭಾರತದ ಆಟಗಾರ್ತಿಯರು ಪರದಾಡಿದರು.
ಕಳೆದ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ 2ರನ್ ಗಳಿಸಿದ್ದಾಗ ಅವರನ್ನು ದೈನಾ ಬೇಗ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಪೂನಮ್ ರಾವತ್ ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದ ಆಟಗಾರ್ತಿ. ಆವರು 47 ರನ್(72ಎ, 5ಬೌ) ಗಳಿಸಿ ನಾಶ್ರಾ ಸಂಧುಗೆ ರಿಟರ್ನ್ ಕ್ಯಾಚ್ ನೀಡಿದರು. ರಾವತ್ ಮತ್ತು ದೀಪ್ತಿ ಶರ್ಮ ಎರಡನೆ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ನೀಡಿದರು.
ನಾಯಕಿ ಮಿಥಾಲಿ ರಾಜ್ (8) ಮತ್ತು ಉಪನಾಯಕಿ ಹರ್ಮನ್‌ಪ್ರೀತ್ ಕೌರ್ (10) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಇದರಿಂದಾಗಿ ತಂಡದ ಸಹ ಆಟಗಾರ್ತಿಯರು ಒತ್ತಡಕ್ಕೆ ಸಿಲುಕಿದರು. ವಿಕೆಟ್ ಕೀಪರ್ ಸುಷ್ಮಾ ವರ್ಮ 35 ಎಸೆತಗಳಲ್ಲಿ 33 ರನ್ (3ಬೌ,1ಸಿ) ದಾಖಲಿಸಿ ತಂಡದ ಸ್ಕೋರ್‌ನ್ನು 150ರ ಗಡಿ ದಾಟಿಸಲು ನೆರವಾದರು. ವರು ಭಾರತದ ಪರ ಏಕೈಕ ಸಿಕ್ಸರ್ ಬಾರಿಸಿದರು. ಮೋನ ಮೆಶ್ರಮ್ (35 ಎಸೆತಗಳಲ್ಲಿ 6ರನ್) ಮತ್ತು ಹರ್ಮನ್‌ಪ್ರೀತ್ (23 ಎಸೆತಗಳಲ್ಲಿ 10ರನ್) ಇವರು ಜೊತೆಯಾಗಿ 8 ಓವರ್‌ಗಳನ್ನು ಎದುರಿಸಿದ್ದರು. ಕೇವಲ 13 ರನ್‌ಗಳನ್ನು ಖಾತೆಗೆ ಸೇರಿಸಿದರು. ಐದನೆ ವಿಕೆಟ್‌ಗೆ ಇವರು ನಡೆಸಿದ ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ತಂಡದ ಸ್ಕೋರ್ 200ರ ಗಡಿ ಮುಟ್ಟಲಿಲ್ಲ.
ಮೆಶ್ರಮ್ ಬೆರಳಿಗೆ ಗಾಯವಾಗಿತ್ತು. ಈ ಕಾರಣದಿಂದಾಗಿ ಅವರು ಬ್ಯಾಟಿಂಗ್ ವೇಳೆ ಸಮಸ್ಯೆ ಎದುರಿಸಿದರು.ಜೂಲನ್ ಗೋಸ್ವಾಮಿ 36 ಎಸೆತಗಳನ್ನು ಎದುರಿಸಿ14 ರನ್ ಗಳಿಸಿದರು.







