ಬಿಜೆಪಿ ಆಳ್ವಿಕೆಯಲ್ಲಿ ಅತ್ಯಧಿಕ ನರಹತ್ಯೆ: ಕಾಂಗ್ರೆಸ್

ಹೊಸದಿಲ್ಲಿ, ಜು.2: ಕಾಂಗ್ರೆಸ್ ಅಳ್ವಿಕೆಯಲ್ಲಿ ನರಹತ್ಯೆಯ ಪ್ರಕರಣಗಳು ಅಧಿಕವಾಗಿತ್ತೆಂಬ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಆರೋಪವನ್ನು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ತಳ್ಳಿಹಾಕಿದ್ದಾರೆ ಹಾಗೂ ಬಿಜೆಪಿಗೆ ಸುಳ್ಳು ಹೇಳುವ ಕಲೆ ಕರಗತವಾಗಿದೆಯೆಂದವರು ಕಟಕಿಯಾಡಿದ್ದಾರೆ.
‘‘ಕಾನೂನುಬಾಹಿರ ನರಹತ್ಯೆ ವಿಷಯಗಳಲ್ಲಿ ಬಿಜೆಪಿಯು ದೋಷಾರೋಪಣೆಗಳನ್ನು ನಡೆಸುವುದರಲ್ಲಿಯೇ ನಿರತವಾಗಿದೆ. 2011-13ರ ಅವಧಿಯಲ್ಲಿ ಗರಿಷ್ಠ ಸಂಖ್ಯೆಯ ಕಾನೂನುಬಾಹಿರ ನರಹತ್ಯೆಗಳು ನಡೆದಿದ್ದವೆಂಬ ವರದಿಗಳು ಸುಳ್ಳು ’’ಎಂದವರು ಹೇಳಿದ್ದಾರೆ.
ಕಳೆದ 70 ವರ್ಷಗಳಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಇಷ್ಟೊಂದು ಪ್ರಮಾಣದ ನರಹತ್ಯೆಗಳು ಎಂದೂ ನಡೆದಿಲ್ಲವೆಂದು ಅವರು ಹೇಳಿದರು. ನರೇಂದ್ರ ಮೋದಿ ಸರಕಾರದ ಮೂರು ವರ್ಷಗಳ ಆಳ್ವಿಕೆಯ ಅವಧಿಯಲ್ಲಿ ದೇಶದಲ್ಲಿ ನರಹತ್ಯೆಯ ಪ್ರಕರಣಗಳು ಹೆಚ್ಚಿವೆಯೆಂಬ ಆರೋಪವನ್ನು ಬಿಜೆಪಿ ಅಧ್ಯಕ್ಷ ಅಲ್ಲಗಳೆದಿದ್ದರು ಹಾಗೂ ಈಗಿನ ಪರಿಸ್ಥಿತಿಗೆ ಹೋಲಿಸಿದಲ್ಲಿ ಹಿಂದಿನ ಕಾಂಗ್ರೆಸ್ ಆಳ್ವಿಕೆಯಲ್ಲಿ ಅತ್ಯಧಿಕ ಹಿಂಸಾಚಾರದ ಪ್ರಕರಣಗಳು ವರದಿಯಾಗಿದ್ದವು ಎಂದವರು ಹೇಳಿದ್ದರು.
2011,2012, 2013ರಲ್ಲಿ ನಡೆದ ನರಹತ್ಯೆಯ ಪ್ರಕರಣಗಳು, ಕಳೆದ ಮೂರು ವರ್ಷಗಳ ನಮ್ಮ ಸರಕಾರದ ಆಳ್ವಿಕೆಯಲ್ಲಿ ನಡೆದುದಕ್ಕಿಂತ ಅಧಿಕವಾಗಿದ್ದವು. ಸಮಾಜವಾದಿ ಪಕ್ಷವು ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗಲೇ ಅಖ್ಲಾಕ್‌ನ ಹತ್ಯೆಯಾಗಿತ್ತು.ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಯು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ ಆ ಘಟನೆಯ ಹೊಣೆ ಎಸ್ಪಿ ಸರಕಾರ ಹೊರಬೇಕಾಗಿದೆ. ಅದರ ಬದಲು ಪ್ರತಿಪಕ್ಷಗಳು ಮೋದಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವು ಎಂದು ಅಮಿತ್ ಶಾ, ಶನಿವಾರ ಗೋವಾ ಸಮಾವೇಶದಲ್ಲಿ ತಿಳಿಸಿದ್ದರು.







