ನ್ಯಾಯಾಧೀಶರ ನೇಮಕಾತಿಗೆ ಹೊಸ ಮಾರ್ಗದರ್ಶಿ ಸೂತ್ರ ಜಾರಿ ಸದ್ಯಕ್ಕಿಲ್ಲ

ಹೊಸದಿಲ್ಲಿ, ಜು.2: ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಜೆ.ಎಸ್.ಖೇಹರ್ ಮುಂದಿನ ತಿಂಗಳು ನಿವೃತ್ತಿಯಾಗಲಿದ್ದರೂ, ಅವರು ಈ ಹುದ್ದೆಯನ್ನೇರಿದ ಆರಂಭದಲ್ಲಿ ನ್ಯಾಯಾಧೀಶರ ನೇಮಕಾತಿಗೆ ಕುರಿತ ಮಾರ್ಗದರ್ಶಿ ಸೂತ್ರಗಳಲ್ಲಿ ಸುಧಾರಣೆ ತರುವ ಪರವಾಗಿ ನೀಡಿದ ತೀರ್ಪು ಇನ್ನೂ ಜಾರಿಗೆ ಬಾರದೆ ನೆನೆಗುದಿಗೆ ಬಿದ್ದಿದೆ.
ಈ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಕಾರ್ಯಾಂಗ ಹಾಗೂ ನ್ಯಾಯಾಂಗದ ನಡುವೆ ಉದ್ಭವಿಸಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಸರಕಾರದ ಪ್ರಯತ್ನ ಇನ್ನೂ ಸಫಲವಾಗಿಲ್ಲವೆಂದು ಕಾನೂನು ಸಚಿವಾಲಯದ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಸಿಜೆಐ ನಿವೃತ್ತರಾಗುವ ಮುನ್ನ ಸರಕಾರದಿಂದ ಈ ಬಗ್ಗೆ ಸುಪ್ರೀಂಕೋರ್ಟ್ ಕೊಲೆಜಿಯಂಗೆ ಯಾವುದೇ ಉತ್ತರ ದೊರೆಯುವ ನಿರೀಕ್ಷೆ ಯಿಲ್ಲವೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಲೆಜಿಯಂ, ಭಾರತದ ಐವರು ಉನ್ನತ ನ್ಯಾಯಾಧೀಶರನ್ನೊಳಗೊಂಡಿದ್ದು, ಅದು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ನ ನ್ಯಾಯಾಂಗ ನೇಮಕಾತಿಗಳಿಗೆ ಅನುಮೋದನೆ ನೀಡುತ್ತದೆ.
ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳ ನ್ಯಾಯಾಂಗ ನೇಮಕಾತಿಗೆ ಸಂಬಂಧಿಸಿ ಹೊಸ ಕಾರ್ಯವಿಧಾನ ವಿಜ್ಞಾಪನಾ ಪತ್ರವನ್ನು (ಎಂಓಪಿ) ಜಾರಿಗೊಳಿಸುವಂತೆ ನ್ಯಾಯಮೂರ್ತಿ ಖೇಹರ್ ನೇತೃತ್ವದ ನ್ಯಾಯಪೀಠವು 2015ರ ಡಿಸೆಂಬರ್ 16ರಂದು ತೀರ್ಪು ನೀಡಿತ್ತು.
ಆದಾಗ್ಯೂ ನ್ಯಾಯಾಂಗ ನೇಮಕಾತಿಗಳು ಈಗಲೂ ಹಳೆಯ ಎಂಓಪಿಯನ್ನು ಆಧರಿಸಿಯೇ ನಡೆಯುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರಕಾರವು ಸುಪ್ರೀಂಕೋರ್ಟ್‌ನಲ್ಲಿ 17 ಹಾಗೂ ಹೈಕೋರ್ಟ್‌ಗಳಿಗೆ 250 ನ್ಯಾಯಾಧೀಶರನ್ನು ನೇಮಕಗೊಳಿಸಿದೆ. ಅವುಗಳಲ್ಲಿ ಹೆಚ್ಚಿನ ನೇಮಕಾತಿಗಳು, 2015ರ ಡಿಸೆಂಬರ್‌ನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಪುನರ್‌ರೂಪಿಸಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕವೇ ನಡೆದಿವೆ.
2016ರ ಜನವರಿಯಿಂದೀಚೆಗೆ ಉಭಯ ತಂಡಗಳ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದವು. ಈ ನಡುವೆ ಕೊಲೆಜಿಯಂ ಮಾರ್ಗರ್ಶಿ ಸೂತ್ರಗಳ ಕರಡಿನಲ್ಲಿರುವ ಕೆಲವು ಅಂಶಗಳ ಬಗ್ಗೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿ, ಅದನ್ನು ಕಾನೂನು ಸಚಿವಾಲಯಕ್ಕೆ ಹಿಂತಿರುಗಿಸಿತ್ತು.
ನೇಮಕಾತಿಗೆ ಸಂಬಂಧಿಸಿದ ಶಿಫಾರಸುಗಳನ್ನು ರಾಷ್ಟ್ರೀಯ ಭದ್ರತೆಯ ನೆಲೆಯಲ್ಲಿ ಸರಕಾರವು ತಡೆಹಿಡಿಯಬಹುದೆಂದು ಕರಡಿಲ್ಲಿ ಉಲ್ಲೇಖಿಸಲಾದ ನಿಬಂಧನೆಗೆ ಕೊಲೇಜಿಯಂ ಆಕ್ಷೇಪ ವ್ಯಕ್ತಪಡಿಸಿದೆಯೆನ್ನಲಾಗಿದೆ. ನ್ಯಾಯಾಂಗ ನೇಮಕಾತಿಗೆ ಸಂಬಂಧಿಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನು ತನಗೆ ನೀಡಬೇಕೆಂದು ಅದರ ವಾದವಾಗಿದೆ.
ನ್ಯಾಯಾಧೀಶರ ನೇಮಕಾತಿಯನ್ನು ನಿರ್ಧರಿಸುವ ವಿಶೇಷ ಅಧಿಕಾರವನ್ನು ಪಡೆದುಕೊಳ್ಳುವ ಬದಲು ಸರಕಾರವು ತನ್ನ ಆಕ್ಷೇಪವನ್ನು ಸಮರ್ಥಿಸುವಂತಹ ಪುರಾವೆಯನ್ನು ಒದಗಿಸಬೇಕೆಂದು ಕೊಲೇಜಿಯಂ ಬಯಸಿದೆ.
ಕಳೆದ ಜೂನ್‌ನಲ್ಲಿ ಕೇಂದ್ರ ಸರಕಾರವು ನೀಡಿದ ಮಾಹಿತಿಗಳನ್ನು ಆಧರಿಸಿ ಅಲಹಾಬಾದ್ ಹೈಕೋರ್ಟ್‌ಗೆ ತಾನು ಶಿಫಾರಸು ಮಾಡಿದ್ದ ಎರಡು ನೇಮಕಾತಿಗಳನ್ನು ಕೊಲೆಜಿಯಂ ಹಿಂತೆಗೆದುಕೊಂಡಿತ್ತು.







