ರಿಯಾದ್ ನಲ್ಲಿ ಸಂಕಷ್ಟದಲ್ಲಿದ್ದ ದಂಪತಿಗೆ ನೆರವಾಗಿ ಮಾನವೀಯತೆ ಮೆರೆದ ಐಎಸ್ ಎಫ್
ವಿದೇಶಕ್ಕೆ ಕರೆಸಿ ವಂಚಿಸಿದ ಏಜೆಂಟ್

ರಿಯಾದ್, ಜು.2: ಏಜೆಂಟ್ ನಿಂದ ವಂಚನೆಗೊಳಗಾಗಿ ರಿಯಾದ್ ನಲ್ಲಿ ಸಂಕಷ್ಟದಲ್ಲಿದ್ದ ಬೆಂಗಳೂರು ಮೂಲದ ದಂಪತಿಗೆ ನೆರವಾಗುವ ಮೂಲಕ ಇಂಡಿಯನ್ ಸೋಷಿಯಲ್ ಫಾರಂ ಮಾನವೀಯತೆ ಮೆರೆದಿದೆ.
ಸುಮಾರು ಮೂರು ತಿಂಗಳುಗಳ ಹಿಂದೆ ಬೆಂಗಳೂರು ಮೂಲದ ಚಾಂದ್ ಪಾಷ ಮತ್ತು ಪತ್ನಿ ಆಮಿನಾಬಿ ಏಜೆಂಟ್ ಒಬ್ಬನ ಮಾತಿಗೆ ಮರುಳಾಗಿ ಪ್ರಾಯೋಜಕನ ಮನೆಯಲ್ಲಿ ಖಾಸಗಿ ವಾಹನ ಚಾಲಕ ಮತ್ತು ಮನೆ ಕೆಲಸವನ್ನು ಮಾಡುವ ಸಲುವಾಗಿ ರಿಯಾದಿಗೆ ತಲುಪಿದ್ದರು. ಆದರೆ ಪ್ರಾಯೋಜಕ ಈ ದಂಪತಿಗೆ ಕೆಲಸ ನೀಡಲು ನಿರಾಕರಿಸಿದ್ದ. "ನನಗೆ ನಿಮ್ಮಂತಹ ಜನರ ಕೆಲಸದ ಅವಶ್ಯಕತೆ ಇಲ್ಲ" ಎಂದು ಹೇಳಿದ್ದಲ್ಲದೆ, ವಾಸ್ತವ್ಯ ಕಾರ್ಡ್(ಇಕಾಮ)ನ್ನು ಮಾಡದೆ, ಅತ್ತ ಪಾಸ್ ಪೋರ್ಟ್ ನೀಡದೆ, ಸುಮಾರು 18 ಸಾವಿರ ರಿಯಾಲಿನ ಬೇಡಿಕೆ ಇಟ್ಟಿದ್ದ.
ಇದರಿಂದ ಕಂಗಾಲಾದ ದಂಪತಿ ಸ್ಥಳೀಯ ಏಜೆಂಟ್ ನನ್ನು ಸಂಪರ್ಕಿಸಿದಾಗ ಆತ ಯಾವುದೇ ಸ್ಪಂದನೆ ನೀಡದೆ ಅಲ್ಲಿಂದ ಪಲಾಯನಗೈದಿದ್ದ. ಯಾರು ಪರಿಚಯದವರಿಲ್ಲದೆ ವಿದೇಶದಲ್ಲಿ ಕಂಗಾಲಾದ ದಂಪತಿ ರಮಝಾನ್ ತಿಂಗಳಲ್ಲಿ ತಿನ್ನಲು ಆಹಾರ ಮತ್ತು ಇರಲು ಮನೆ ಇಲ್ಲದೆ, ಸುಡು ಬಿಸಿನಲ್ಲಿ ಅಲ್ಲಲ್ಲಿ ಬೇಡುತ್ತಾ, ಬೀದಿಗಳಲ್ಲಿ ಅತ್ಯಂತ ಶೋಚನೀಯವಾಗಿ ದಿನಗಳನ್ನು ಕಳೆಯುತ್ತಿದ್ದರು. ಇವರ ದಯನೀಯ ಪರಿಸ್ಥಿತಿಯನ್ನು ಅರಿತ ಇಂಡಿಯನ್ ಸೋಷಿಯಲ್ ಫಾರಂ, ಕರ್ನಾಟಕ ರಿಯಾದ್ ಘಟಕವು ತಕ್ಷಣವೇ ಇಸ್ಮಾಯಿಲ್ ಮಂಗಳಪೇಟೆ, ನವೀದ್ ಕುಂದಾಪುರ ಮತ್ತು ಶಾಫಿ ವಾಮಾಂಜೂರು ನೇತೃತ್ವದ ತಂಡ ರಚಿಸಿ ದಂಪತಿಯನ್ನು ಮುಖತಃ ಭೇಟಿಯಾಗಿ ಈ ಬಗ್ಗೆ ವಿವರ ಪಡೆದರು.

ತಕ್ಷಣವೇ ದಂಪತಿಗೆ ತಾತ್ಕಾಲಿಕ ಮನೆ ಮತ್ತು ಆಹಾರದ ವ್ಯವಸ್ಥೆಯನ್ನು ಮಾಡಿದ್ದರು. ಇವರನ್ನು ಸ್ವದೇಶಕ್ಕೆ ಕಳುಹಿಸಿಕೊಡುವ ಸಲುವಾಗಿ ಭಾರತೀಯ ರಾಯಭಾರಿಯನ್ನು ಸಂಪರ್ಕಿಸಿ ಬೇಕಾದ ಅಗತ್ಯ ದಾಖಲೆಗಳನ್ನು ತಯಾರಿಸಲಾಯಿತು. ಚಾಂದ್ ಪಾಷರವರ ದಾಖಲೆಯಲ್ಲಿ ಸ್ವಲ್ಪ ಸಮಸ್ಯೆ ಇದ್ದ ಕಾರಣ ಸದ್ಯಕ್ಕೆ ಆಮೀನಾಬಿಯವರನ್ನು ಭಾರತಕ್ಕೆ ಮರಳಿ ಕಳುಹಿಸಿ ಕೊಡಲು ಇಂಡಿಯನ್ ಸೋಷಿಯಲ್ ಪೋರಂ ಮತ್ತು ಸ್ಥಳೀಯ ದಾನಿಯಾದ ಮುಷ್ತಾಕ್ ಉಡುಪಿಯವರ ನೆರವಿನೊಂದಿಗೆ 30 ಸಾವಿರ ರೂ.ಗಳನ್ನು ಟಿಕೆಟ್ ಗಾಗಿ ಸಂಗ್ರಹ ಮಾಡಲಾಯಿತು.
ಜೂ.29ರಂದು ಆಮೀನಾಬಿಯವರನ್ನು ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಕಳುಹಿಸಿ ಕೊಡಲಾಗಿದೆ. ಸ್ವದೇಶಕ್ಕೆ ಮರಳಿದ ಅಮೀನಾಬಿಯವರನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಚಾಂದ್ ಪಾಷರನ್ನು ಕಳುಹಿಸಿಕೊಡುವ ಸಲುವಾಗಿ ಇಂಡಿಯನ್ ಸೋಷಿಯಲ್ ಫಾರಂನ ತಂಡವು ಸಕಲ ಸಿದ್ಧತೆಯನ್ನು ನಡೆಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.







