ಸಂಜೋತಾ ಸ್ಫೋಟ ಸಾಕ್ಷಿಗಳನ್ನು ಭಾರತಕ್ಕೆ ಕಳುಹಿಸಲು ಸಮಯ ಕೋರಿದ ಪಾಕಿಸ್ತಾನ

ಹೊಸದಿಲ್ಲಿ,ಜು.2: 68 ಜನರು ಬಲಿಯಾಗಿದ್ದ, 2007ರ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಹರ್ಯಾಣದ ಪಂಚಕುಲಾ ವಿಶೇಷ ನ್ಯಾಯಾಲಯದೆದುರು 13 ಸಾಕ್ಷಿಗಳನ್ನು ಹಾಜರು ಪಡಿಸುವ ಕುರಿತು ನಿರ್ಧಾರ ವೊಂದನ್ನು ಕೈಗೊಳ್ಳಲು ತನಗೆ ಇನ್ನೂ ನಾಲ್ಕು ತಿಂಗಳು ಹೆಚ್ಚಿನ ಸಮಯಾವಕಾಶ ನೀಡುವಂತೆ ಪಾಕಿಸ್ತಾನವು ಭಾರತವನ್ನು ಕೋರಿದೆ.
13 ಸಾಕ್ಷಿಗಳ ಹಾಜರಾತಿಗಾಗಿ ವಿಶೇಷ ಎನ್‌ಐಎ ನ್ಯಾಯಾಲಯವು ಹೊರಡಿಸಿದ್ದ ಸಮನ್‌ಗಳನ್ನು ಕಳೆದ ತಿಂಗಳು ಪಾಕ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು. ಸಾಕ್ಷಿಗಳನ್ನು ಜು.4ರಿಂದ ತನ್ನೆದುರು ಹಾಜರು ಪಡಿಸುವಂತೆ ನ್ಯಾಯಾಲಯವು ಸೂಚಿಸಿತ್ತು.
ಮಂಗಳವಾರ ವಿಚಾರಣೆ ಪುನರಾರಂಭಗೊಳ್ಳಲಿದ್ದು, ಎನ್‌ಐಎ ವಕೀಲರು ಪಾಕಿಸ್ತಾನಿ ಅಧಿಕಾರಿಗಳ ನಿರ್ಧಾರದ ಕುರಿತು ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಲಿದ್ದಾರೆ.
ಪ್ರಕರಣದಲ್ಲಿಯ 299 ಸಾಕ್ಷಿಗಳ ಪೈಕಿ 249 ಸಾಕ್ಷಿಗಳ ವಿಚಾರಣೆಯನ್ನು ನ್ಯಾಯಾಲಯವು ಈಗಾಗಲೇ ಪೂರ್ಣಗೊಳಿಸಿದೆ.
2007,ಫೆ.18ರಂದು ಪಾಣಿಪತ್‌ನಲ್ಲಿ ಸಮಝೌತಾ ಎಕ್ಸ್‌ಪ್ರೆಸ್‌ನ ಎರಡು ಬೋಗಿ ಗಳಲ್ಲಿ ಸಂಭವಿಸಿದ್ದ ಸ್ಫೊಟಗಳಲ್ಲಿ 68 ಜನರು ಸಜೀವ ದಹನಗೊಂಡಿದ್ದರು.
ಈ ಸ್ಫೋಟಗಳ ಹಿಂದೆ ನಿಷೇಧಿತ ಸಿಮಿ ಸಂಘಟನೆಯ ಕೈವಾಡವಿದೆಯೆಂದು ತನಿಖಾಧಿಕಾರಿಗಳು ಆರಂಭದಲ್ಲಿ ಭಾವಿಸಿದ್ದರಾದರೂ, ಬಳಿಕ ಬಲಪಂಥೀಯ ಒಲವು ಹೊಂದಿರುವ ಗುಂಪೊಂದು ಈ ಸ್ಫೋಟಗಳನ್ನು ನಡೆಸಿದೆ ಎಂಬ ತೀರ್ಮಾನಕ್ಕೆ ಬಂದಿದ್ದರು. ಸ್ವಾಮಿ ಅಸೀಮಾನಂದ ಸೇರಿದಂತೆ ಹಲವಾರು ಜನರ ವಿರುದ್ಧ ಎನ್‌ಐಎ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು.







