ರಾಜಸ್ಥಾನ:ಮೊಬೈಲ್ ಫೋನ್,ಜೀನ್ಸ್‌ನಿಂದ ದೂರವಿರಿ ಯುವತಿಯರಿಗೆ ಖಾಪ್ ಪಂಚಾಯತ್‌ನ ತಾಕೀತು

ಜೈಪುರ,ಜು.2: ಯುವತಿಯರು ಜೀನ್ಸ್ ಮತ್ತು ಆಕರ್ಷಕ ಬಟ್ಟೆಗಳನ್ನು ತೊಡಬಾರದು ಮತ್ತು ಮೊಬೈಲ್ ಪೋನ್‌ಗಳನ್ನು ಬಳಸಕೂಡದು ಎಂದು ತಾಕೀತು ಮಾಡಿರುವ ರಾಜಸ್ಥಾನದ ಧೋಲ್‌ಪುರ ಜಿಲ್ಲೆಯ ಬಲ್ದಿಯಾಪುರ ಗ್ರಾಮದ ಪಂಚಾಯತ್, ಇವು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತವೆ ಎಂದು ಹೇಳಿದೆ. ಪಂಚಾಯತ್‌ನ ಈ ನಿರ್ಧಾರದಿಂದ ಯುವತಿಯರಿಗೆ ಲೈಂಗಿಕ ಕಿರುಕುಳ ತಪ್ಪಲಿದೆ ಎಂದು ಸದಸ್ಯರು ಹೇಳಿದ್ದಾರೆ.
ಮದ್ಯಪಾನವನ್ನೂ ನಿಷೇಧಿಸಿರುವ ಪಂಚಾಯತ್, ಯಾವುದೇ ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಪೊಲೀಸರನ್ನು ಸಂಪರ್ಕಿಸಕೂಡದು ಮತ್ತು ಅದನ್ನು ಪಂಚಾಯತ್‌ನ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದೂ ನಿರ್ಣಯಿಸಿದೆ. ಪಂಚಾಯತ್‌ನಲ್ಲಿ ಪರಿಹಾರ ದೊರೆಯದಿದ್ದರೆ ಮಾತ್ರ ಪೊಲೀಸ್ ಠಾಣೆಗೆ ತೆರಳಬಹುದು ಎಂದು ಅದು ಸೂಚಿಸಿದೆ.
ಮದ್ಯಪಾನ ಮಾಡಿದವರಿಗೆ 1,100 ರೂ.ಗಳ ದಂಡ ಮತ್ತು ಮದ್ಯ ಮಾರಾಟ ಹಾಗೂ ಸೇವನೆಯ ಬಗ್ಗೆ ಮಾಹಿತಿ ನೀಡುವವರಿಗೆ 500 ರೂ.ಗಳ ಪುರಸ್ಕಾರವನ್ನು ಘೋಷಿಸಿರುವ ಪಂಚಾಯತ್, ಗ್ರಾಮದಲ್ಲಿ ತಂಬಾಕು ಪೊಟ್ಟಣಗಳ ಮಾರಾಟವನ್ನು ನಿಷೇಧಿಸಿದೆ.
ಯುವತಿಯರು ಜೀನ್ಸ್ ಧರಿಸುವುದರಿಂದ ಮತ್ತು ಮೊಬೈಲ್ ಫೋನ್‌ಗಳನ್ನು ಬಳಸುವುದರಿಂದ ಭಾರತೀಯ ಸಂಸ್ಕೃತಿ ನಾಶವಾಗುತ್ತದೆ ಎನ್ನುವುದು ಪಂಚಾಯತ್ ಸದಸ್ಯರ ಒಮ್ಮತದ ಅಭಿಪ್ರಾಯ. ಇಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಹೆಚ್ಚಿನ ಯುವತಿಯರು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದು, ಆಧುನಿಕ ಉಡುಪುಗಳನ್ನು ತೊಡುತ್ತಿದ್ದಾರೆ ಎಂದಿರುವ ಪಂಚಾಯತ್, ಯುವತಿಯರಿಗೆ ಜೀನ್ಸ್ ಮತ್ತು ಮೊಬೈಲ್ ಫೋನ್ ಕೊಡಿಸದಂತೆ ಹೆತ್ತವರಿಗೆ ಸೂಚಿಸಿದೆ. ಅಲ್ಲದೆ ಹೆಣ್ಣುಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇರಿಸುವಂತೆಯೂ ಸೂಚಿಸಿದೆ.
ಪಂಚಾಯತ್‌ನ ನಿರ್ಣಯಗಳನ್ನು ಗ್ರಾಮದಲ್ಲಿ ಬಲಪೂರ್ವಕವಾಗಿ ಜಾರಿಗೊಳಿಸ ಲಾಗುವುದು ಎಂದು ಸದಸ್ಯರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನ ಮಾಡಲು ಪಂಚಾಯತ್ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮಹಿಳೆಯರು ಆಕರ್ಷಕ ಉಡುಪುಗಳನ್ನು ಧರಿಸುತ್ತಿರು ವುದರಿಂದ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಘಟನೆಗಳು ಹೆಚ್ಚುತ್ತಿವೆ ಎಂದು ಪಂಚಾಯತ್‌ನ ಸರಪಂಚ ಕಣಸಿಲ್ ಹರಿರಾಮ್ ಸಿಂಗ್ ಪರಮಾರ್ ಹೇಳಿದರು.
ಪಂಚಾಯತ್ ನೇಮಕಗೊಳಿಸಿರುವ ಸದಸ್ಯರು ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಪ್ರತಿ ತಿಂಗಳ ಮೊದಲ ದಿನದಂದು ಸಭೆ ಸೇರಲಿರುವ ಪಂಚಾಯತ್ ಆಗಿರುವ ಬೆಳವಣಿಗೆಗಳನ್ನು ಚರ್ಚಿಸಲಿದೆ.
ಕುಶಾವ್ಹಾ ಸಮುದಾಯದ ಪ್ರಾಬಲ್ಯವಿರುವ ಬಲ್ದಿಯಾಪುರದಲ್ಲಿ ಸುಮಾರು 2,500 ಜನಸಂಖ್ಯೆಯಿದೆ. ಕಣಸಿಲ್ ಪಂಚಾಯತ್‌ನ ವ್ಯಾಪ್ತಿಯಲ್ಲಿರುವ ಇತರ ಗ್ರಾಮಗಳಲ್ಲಿ ಯೂ ಈ ನಿಯಮಗಳು ಶೀಘ್ರ ಜಾರಿಗೊಳ್ಳಲಿವೆ.
ಮದ್ಯ ಮಾರಾಟ ಮತ್ತು ಸೇವನೆಯನ್ನು ಪಂಚಾಯತ್ ನಿಷೇಧಿಸಿರುವುದು ಒಳ್ಳೆಯ ಕ್ರಮ. ಆದರೆ ಯುವತಿಯರು ಜೀನ್ಸ್ ಧರಿಸಬಾರದು ಮತ್ತು ಮೊಬೈಲ್ ಬಳಸಕೂಡದು ಎನ್ನುವ ನಿರ್ಧಾರ ಕಾನೂನಿಗೆ ವಿರುದ್ಧವಾಗಿದೆ ಎಂದು ಧೋಲ್‌ಪುರದ ಹೆಚ್ಚುವರಿ ಜಿಲ್ಲಾಧಿಕಾರಿ ವಿನೋದಕುಮಾರ ಮೀನಾ ಹೇಳಿದ್ದಾರೆ.







