ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಮೊಬೈಲ್ ಫೋನ್ ಕಳವು

ಕಾಸರಗೋಡು, ಜು.3: ಮನೆಯೊಂದಕ್ಕೆ ನುಗ್ಗಿದ ಕಳ್ಳರು 16 ಪವನ್ ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಕಳವುಗೈದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಕಟ್ಟತ್ತಡ್ಕದಲ್ಲಿ ನಡೆದಿದೆ.
ಕಟ್ಟತ್ತಡ್ಕ ಮುಹಿಮ್ಮತ್ ನಗರದ ಅಬ್ದುಲ್ಲಾ ಕುಂಞಿಯವರ ಮನೆಯಲ್ಲಿ ಕಳವು ನಡೆದಿದೆ. ಅಬ್ದುಲ್ಲಾ ಕುಂಞಿಯವರ ಪುತ್ರನ ವಿವಾಹ ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಕುಟುಂಬವು ಮನೆಗೆ ಬೀಗ ಹಾಕಿ ತೆರಳಿತ್ತು. ರಾತ್ರಿ 10 ಗಂಟೆಗೆ ಮರಳಿ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಸಾಧಾರಣವಾಗಿ ಮನೆಗೆ ಬೀಗ ಹಾಕಿ ತೆರಳುವಾಗ ಕೀಲಿಕೈಯನ್ನು ಮನೆಯ ಚಾವಡಿಯ ಕಿಟಿಕಿಯಲ್ಲಿಡುತ್ತಿದ್ದರು ಎನ್ನಲಾಗಿದೆ. ನಿನ್ನೆಯೂ ಅಲ್ಲಿಯೇ ಕೀಲಿ ಕೈ ಇರಿಸಲಾಗಿತ್ತು. ಇದನ್ನೇ ಬಳಸಿ ಬಾಗಿಲು ತೆರೆದು ಮನೆಯೊಳಗೆ ನುಗ್ಗಿದ ಕಳ್ಳರು ಕಳವು ನಡೆಸಿದ್ದಾರೆ.
ಬೆಡ್ ರೂಂನ ಕೊಠಡಿಯೊಳಗಿನ ಕಪಾಟಿನಲ್ಲಿರಿಸಿದ್ದ ಚಿನ್ನಾಭರಣ ಕಳ್ಳತನವಾಗಿದೆ. ಸರ, ಬೆಂಡೋಲೆ, ಬ್ರೇಸ್‌ಲೈಟ್‌ಗಳು ಒಳಗೊಂಡು 16 ಪವನ್ ಚಿನ್ನಾಭರಣ ಕಳವು ಮಾಡಲಾಗಿದೆ. ಇದರಿಂದ ಸುಮಾರು ಮೂರೂವರೆ ಲಕ್ಷ ರೂ.ಗಳ ನಷ್ಟ ಉಂಟಾಗಿದೆ. ಅಲ್ಲದೆ ಮನೆಯಲ್ಲಿದ್ದ ಎರಡು ಮೊಬೈಲ್ ಫೋನ್‌ಗಳನ್ನು ಕಳ್ಳರು ದೋಚಿದ್ದಾರೆ. ಕುಂಬಳೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ





