ಪುರುಷರಿಗೆ ಪ್ರವೇಶವಿಲ್ಲದ ದೇವಸ್ಥಾನಗಳೂ ಇವೆ !
ಇಲ್ಲಿದೆ ಆ ದೇವಸ್ಥಾನಗಳ ವಿವರ

ದೇವಸ್ಥಾನದಂತಹ ಆರಾಧನಾ ತಾಣಗಳು ದೇವರು ನಮ್ಮ ರಕ್ಷಣೆಗಿದ್ದಾನೆ ಎಂಬ ಭಾವವನ್ನು ಮೂಡಿಸುವ ಜೊತೆಗೆ ನಮಗೆ ಶಾಂತಿ-ಸಮಾಧಾನಗಳನ್ನು ನೀಡುತ್ತವೆ. ಆದರೆ ಲಿಂಗವನ್ನು ಆಧರಿಸಿ ದೇವಸ್ಥಾನದೊಳಗೆ ಪ್ರವೇಶಾವಕಾಶವನ್ನು ನೀಡದಿದ್ದರೆ? ಮಹಿಳೆಯರಿಗೆ ಪ್ರವೇಶಾವಕಾಶವಿಲ್ಲದ ಶಬರಿಮಲೆ ಕ್ಷೇತ್ರದಂತಹ ದೇವಸ್ಥಾನಗಳಿವೆ. ಹಾಗಯೇ ಪುರುಷರಿಗೆ ಪ್ರವೇಶಾವಕಾಶವಿಲ್ಲದ ದೇವಸ್ಥಾನಗಳೂ ಇವೆ.
ಇಂತಹ ಐದುವಿಶಿಷ್ಟ ದೇಗುಲಗಳ ವಿವರಗಳಿಲ್ಲಿವೆ. ಕೆಲವು ನಿರ್ದಿಷ್ಟ ದಿನಗಳಲ್ಲಿ ಅಥವಾ ಸಂದರ್ಭಗಳಲ್ಲಿ ಈ ದೇವಸ್ಥಾನಗಳಲ್ಲಿ ಪುರುಷರ ಪ್ರವೇಶಕ್ಕೆ ಅವಕಾಶವಿಲ್ಲ.
ಅಟ್ಟುಕಾಲ್ ದೇವಸ್ಥಾನ

ಕೇರಳದಲ್ಲಿರುವ ಅಟ್ಟುಕಾಲ್ ಭಗವತಿ ದೇವಸ್ಥಾನದಲ್ಲಿ ಪೊಂಗಲ್ ಹಬ್ಬದ ಸಂದರ್ಭ ದಲ್ಲಿ ಲಕ್ಷಾಂತರ ಮಹಿಳೆಯರು ಸೇರುತ್ತಾರೆ. ಇದು ಧಾರ್ಮಿಕ ಚಟುವಟಿಕೆಗಾಗಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಸಮಾವೇಶವೆಂದು ಗಿನ್ನಿಸ್ ವಿಶ್ವದಾಖಲೆಗಳ ಪುಸ್ತಕದಲ್ಲಿ ಸೇರಿದೆ. 10 ದಿನಗಳ ಕಾಲ ನಡೆಯುವ ಈ ಉತ್ಸವದ ಅವಧಿಯಲ್ಲಿ ಪುರುಷರಿಗೆ ದೇವಸ್ಥಾನದಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ.
ಚಕ್ಕುಲತಾಕಾವು ದೇವಸ್ಥಾನ

ಇದು ಕೇರಳದಲ್ಲಿರುವ ದೇವಿ ಭಗವತಿಯ ಇನ್ನೊಂದು ಪ್ರಮುಖ ದೇವಸ್ಥಾನ ವಾಗಿದೆ. ‘ಧನು’ ಎಂದು ಕರೆಯಲಾಗುವ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಮೊದಲ ಶುಕ್ರವಾರ ಈ ದೇವಸ್ಥಾನದಲ್ಲಿ ‘ನಾರಿ ಪೂಜೆ’ ನಡೆಯುತ್ತದೆ. ಮಹಿಳೆಯರು 10 ದಿನಗಳ ಕಾಲ ಉಪವಾಸವಿದ್ದು ಈ ದಿನದಂದು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಅಲ್ಲಿ ಪುರುಷ ಅರ್ಚಕರು ಅವರ ಪಾದಗಳನ್ನು ತೊಳೆಯುತ್ತಾರೆ. ಅಂದು ದೇವಸ್ಥಾನದಲ್ಲಿ ಅರ್ಚಕರನ್ನು ಹೊರತುಪಡಿಸಿ ಇತರ ಪುರುಷರ ಪ್ರವೇಶವನ್ನು ನಿಷೇಧಿಸಲಾಗುತ್ತದೆ.
ಬ್ರಹ್ಮ ದೇಗುಲ

ರಾಜಸ್ಥಾನದ ಪುಷ್ಕರದಲ್ಲಿರುವ ಬ್ರಹ್ಮ ದೇವಸ್ಥಾನದಲ್ಲಿ ವಿವಾಹಿತ ಪುರುಷರಿಗೆ ಪ್ರವೇಶಾವಕಾಶವಿಲ್ಲ. ಕಾರ್ತಿಕ ಹುಣ್ಣಿಮೆಯಂದು ಈ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ನಡೆಯುತ್ತದೆ.
ಭಗತಿ ಮಾ ದೇವಸ್ಥಾನ

ಈ ದೇವಸ್ಥಾನವು ಕನ್ಯಾಕುಮಾರಿಯಲ್ಲಿದೆ. ಪರಮೇಶ್ವರನನ್ನು ಪತಿಯಾಗಿ ಪಡೆಯಲು ಪಾರ್ವತಿ ಅತ್ಯಂತ ಕಠಿಣ ತಪಸ್ಸನ್ನು ಆಚರಿಸಿದ್ದು ಇದೇ ಸ್ಥಳದಲ್ಲಿ ಎನ್ನಲಾಗಿದೆ. ಈ ದೇವಸ್ಥಾನವನ್ನು ಮಹಿಳೆಯರು ಮಾತ್ರ ಪ್ರವೇಶಿಸಬಹುದಾಗಿದ್ದು, ಪುರುಷರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಮಾತಾ ದೇವಸ್ಥಾನ

ಬಿಹಾರದ ಮುಝಫರ್‌ಪುರದಲ್ಲಿರುವ ಈ ದೇವಸ್ಥಾನದಲ್ಲಿ ವಿಶೇಷ ಅವಧಿಯ ಸಂದರ್ಭ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶಾವಕಾಶವಿದೆ. ಈ ಸಮಯದಲ್ಲಿ ದೇವಸ್ಥಾನದ ಅರ್ಚಕರೂ ಆವರಣವನ್ನು ಪ್ರವೇಶಿಸುವಂತಿಲ್ಲ.







