ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ಅಡಗಿ ಕೂತದ್ದು ಹೀಗೆ !

ಲಂಡನ್,ಜು.3 : ಕಣ್ಣಾಮುಚ್ಚಾಲೆ ಆಟವೆಂದರೆ ಮಕ್ಕಳಿಗೆ ಅಚ್ಚುಮೆಚ್ಚು, ಯಾರ ಕಣ್ಣಿಗೂ ಬೀಳದಂತೆ ಅಡಗಿ ಕುಳಿತುಕೊಳ್ಳುವುದರಲ್ಲಿಯೇ ಇರುವುದು ಮಜಾ. ಇತ್ತೀಚೆಗೆ ವೆಸ್ಟ್ ಯಾರ್ಕ್ ಶೈರ್ ಪೊಲೀಸರು ಕಾಲ್ಡರ್ ಡೇಲ್ ಎಂಬಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಹುಡುಕಿಕೊಂಡು ಹೋದಾಗ ಆತ ಪೊಲೀಸರ ಕಣ್ತಪ್ಪಿಸಿ ಅಡಗಿ ಕುಳಿತುಕೊಂಡು ಬಿಟ್ಟ. ಆದರೆ ಆತ ಅಡಗಿಕೊಂಡ ಸ್ಥಳ ಯಾವುದು ಗೊತ್ತೇ ?ಮಂಚ ಯಾ ಸೋಫವೊಂದರ ಕೆಳಗೆ ತೂರಿಕೊಂಡ ಆತ ತನ್ನ ಕಾಲನ್ನು ಮಾತ್ರ ಎಲ್ಲರಿಗೂ ಕಾಣಿಸುವಂತೆ ಹೊರಗೆ ಚಾಚಿಕೊಂಡಿದ್ದ.
ಆತನನ್ನು ಪೊಲೀಸರು ಸುಲಭವಾಗಿ ಕಂಡು ಹಿಡಿದು ಬಿಟ್ಟರೆಂದು ಬೇರೆ ಹೇಳಬೇಕಾಗಿಲ್ಲ ಬಿಡಿ. ಪೊಲೀಸ್ ಸಿಬ್ಬಂದಿಯೊಬ್ಬರು ಆತ ಕಾಲು ಹೊರಕ್ಕೆ ಚಾಚಿಕೊಂಡು ಅಡಗಿಕೊಂಡಿದ್ದ ಫೋಟೋವೊಂದನ್ನೂ ಕ್ಲಿಕ್ಕಿಸಿದ್ದಾರೆ. ‘‘ನಾವು ಆತನನ್ನು ಕಂಡು ಹಿಡಿದು ಬಿಟ್ಟೆವು. ಆದರೆ ಆತನಿಗೇನು ಹೈಡ್ ಎಂಡ್ ಸೀಕ್ ಚಾಂಪಿಯನ್ ಪ್ರಶಸ್ತಿ ದೊರೆಯುವುದಿಲ್ಲ ಬಿಡಿ,’’ ಎಂದು ಈ ಫೋಟೋಗೆ ಅವರು ಕ್ಯಾಪ್ಶನ್ ಕೂಡ ನೀಡಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು ಹಲವಾರು ಮಂದಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ‘‘ಆತ ಸಾಕ್ಸ್ ಧರಿಸಿದ್ದರೆ ಆತ ಕಣ್ಣಿಗೆ ಬೀಳುತ್ತಿರಲಿಲ್ಲವೇನೋ’’ ಎಂದು ಒಬ್ಬರು ಬರೆದಿದ್ದರೆ ಇನ್ನೊಬ್ಬರು ‘‘ನನ್ನ ಆರು ವರ್ಷದ ಮಗ ಇದಕ್ಕಿಂತ ಚೆನ್ನಾಗಿ ಹೈಡ್ ಎಂಡ್ ಸೀಕ್ ಆಡುತ್ತಾನೆ,’’ ಎಂದು ಬರೆದಿದ್ದಾರೆ.







