ಮಹಿಳೆಯರಿಗಾಗಿ ಮಹಿಳೆಯರಿಂದ “ಪಿಂಕ್ ಆಟೋ” ಸೇವೆ ಆರಂಭ

ಸೂರತ್ : ಗುಜರಾತ್ ರಾಜ್ಯದ ಸೂರತ್ ನಗರದ ಮುನಿಸಿಪಲ್ ಕಾರ್ಪೊರೇಶನ್ ಮಹಿಳೆಯರಿಗಾಗಿ ಮಹಿಳೆಯರಿಂದ ಆಟೋರಿಕ್ಷಾ ಸೇವೆಯೊಂದನ್ನು ಆರಂಭಿಸಿದೆ. ಈ ಪಿಂಕ್ ಆಟೋ ಸರ್ವಿಸ್ ಗೆ ಮುಖ್ಯಮಂತ್ರಿ ವಿಜಯ್ ರೂಪಾನಿ ರವಿವಾರದಂದು ನಗರದ ಡಾ ಶ್ಯಾಮಪ್ರಸಾದ್ ಕಮ್ಯುನಿಟಿ ಹಾಲ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಹಸಿರು ನಿಶಾನೆ ತೋರಿಸಿದರು.
ಹಲವಾರು ಮಹಿಳೆಯರಿಗೆ ಆಟೋ ಓಡಿಸಲು ತರಬೇತಿ ನೀಡಿರುವ ಮುನಿಸಿಪಲ್ ಕಾರ್ಪೊರೇಶನ್ ಅವರಿಗೆ ಆಟೋ ಖರೀದಿಸಲು ಬ್ಯಾಂಕ್ ಸಾಲ ದೊರೆಯಲೂ ಸಹಾಯ ಮಾಡಿದೆ. ಬ್ಯಾಂಕ್ ಆಫ್ ಬರೋಡಾದೊಂದಿಗೆ ಮುನಿಸಿಪಲ್ ಕಾರ್ಪೊರೇಶನ್ ಮಾಡಿರುವ ಒಪ್ಪಂದದಂತೆ ಶೇ 7 ಬಡ್ಡಿ ದರದಲ್ಲಿ ಈ ಮಹಿಳೆಯರಿಗೆ ಆಟೋ ಖರೀದಿಗಾಗಿ ಸಾಲ ಒದಗಿಸಲಾಗಿದ್ದು. ಪ್ರತಿ ಆಟೋಗೆ ರೂ 84,000 ಸಾಲ ನೀಡಿರುವ ಬ್ಯಾಂಕ್ ಶೇ 25ರಷ್ಟು ಸಬ್ಸಿಡಿಯನ್ನೂ ಒದಗಿಸಿದೆ.
‘‘ಸುಮಾರು 70 ಮಹಿಳೆಯರಿಗೆ ಆಟೋ ಚಾಲನೆಯಲ್ಲಿ ತರಬೇತಿ ನೀಡಲಾಗಿದ್ದು ಅವರಲ್ಲಿ 15 ಮಂದಿ ಸೇವೆಗೆ ಸಿದ್ಧರಿದ್ದಾರೆ. ಸ್ಥಳೀಯ ಬಾಲಕಿಯರ ಶಾಲೆಗಳ ಮಕ್ಕಳನ್ನು ಕರೆದುಕೊಂಡು ಹೋಗುವ ಕೆಲಸವನ್ನೂ ಅವರಿಗೆ ತೆಗೆಸಿಕೊಟ್ಟಿದ್ದೇವೆ, ಎಂದು ಅರ್ಬನ್ ಕಮ್ಯುನಿಟಿ ಡೆವಲೆಪ್ಮೆಂಟೆ ಇಲಾಖೆಯ ಸಹಾಯಕ ಆಯುಕ್ತೆ ಗಾಯತ್ರಿ ಜರಿವಾಲ ಹೇಳಿದ್ದಾರೆ.
ಆಟೋರಿಕ್ಷಾದಲ್ಲಿ ಪ್ರಯಾಣಿಸುವಾಗ ಮಹಿಳೆಯರು ಹಲವಾರು ಬಾರಿ ಕಿರುಕುಳ ಅನುಭವಿಸುವುದರಿಂದ ಅದಕ್ಕೆ ಅಂತ್ಯ ಹಾಡಲೆಂದೇ ಈ ಪಿಂಕ್ ಆಟೋಗಳ ಸೇವೆ ಆರಂಭಿಸಲಾಗಿದೆ.
ಪ್ರತಿ ಆಟೋ ಚಾಲಕಿ ತಿಂಗಳೊಂದಕ್ಕೆ ಸುಮಾರು ರೂ 18,000 ಆದಾಯ ಗಳಿಸಬಹುದೆಂದು ನಿರೀಕ್ಷಿಸಲಾಗಿದೆ.







