1962ರ ಯುದ್ಧ ಹೀರೊ ಜಸ್ವಂತ್ ಸಿಂಗ್‌ಗೆ ಪರಮವೀರ ಚಕ್ರ ನೀಡಲು ಕುಟುಂಬದ ಆಗ್ರಹ

ಡೆಹ್ರಾಡೂನ್,ಜು.3: ಭಾರತ-ಭೂತಾನ್-ಟಿಬೆಟ್ ಸಂಗಮ ಸ್ಥಳದಲ್ಲಿ ಚೀನಿ ಪಡೆಗಳು ಸೃಷ್ಟಿಸಿರುವ ಸದ್ಯದ ಬಿಕ್ಕಟ್ಟಿನ ನಡುವೆಯೇ 1962ರ ಭಾರತ-ಚೀನಾ ಸಮರದ ವೇಳೆ ಅರುಣಾಚಲ ಪ್ರದೇಶದ ತನ್ನ ನೆಲೆಯಲ್ಲಿ ಏಕಾಂಗಿಯಾಗಿ ಹೋರಾಡಿ ನೂರಾರು ಚೀನಿ ಸೈನಿಕರನ್ನು ಬಲಿ ತೆಗೆದುಕೊಂಡಿದ್ದ ರೈಫಲ್‌ಮನ್ ಜಸ್ವಂತ್ ಸಿಂಗ್ ಅವರಿಗೆ ದೇಶದ ಅತ್ಯುನ್ನತ ಮಿಲಿಟರಿ ಪದಕ ಪರಮವೀರ ಚಕ್ರವನ್ನು ನೀಡುವಂತೆ ಅವರ ಕುಟುಂಬವು ಆಗ್ರಹಿಸಿದೆ.
ಜಸ್ವಂತ್ ಭಾಯಿಗೆ ಪರಮವೀರ ಚಕ್ರ ಗೌರವ ಪ್ರದಾನವಾಗಬೇಕೆಂದು ನಾವು ಬಯಸಿದ್ದೇವೆ. ಈ ಬಗ್ಗೆ ನಾವು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದೆವು. ಅವರ ಕಚೇರಿಯು ಪತ್ರ ಸ್ವೀಕೃತವಾಗಿದ್ದ ಬಗ್ಗೆ ಹಿಂಬರಹವನ್ನೂ ಕಳುಹಿಸಿತ್ತು. ಆದರೆ ಈವರೆಗೂ ಏನೂ ಆಗಿಲ್ಲ ಎಂದು ದಿವಂಗತ ಯೋಧನ ಕಿರಿಯ ಸೋದರ ವಿಜಯ್ ರಾವತ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಜಸ್ವಂತ್ ಸಿಂಗ್‌ಗೆ ದೇಶದ ಎರಡನೇ ಅತ್ಯುನ್ನತ ಮಿಲಿಟರಿ ಶೌರ್ಯ ಪದಕವಾಗಿರುವ ಮಹಾವೀರ ಚಕ್ರವನ್ನು ಮರಣೋತ್ತರವಾಗಿ ಪ್ರದಾನಿಸಲಾಗಿತ್ತು. ಅವರ ಸ್ವಗ್ರಾಮ ಪೌಡಿ ಗಢ್ವಾಲ್ ಜಿಲ್ಲೆಯ ಬರ್ಯುನ್ ಇಂದಿಗೂ ತನ್ನ ಹೆಮ್ಮೆಯ ಪುತ್ರನನ್ನು ಮರೆತಿಲ್ಲ. ಗ್ರಾಮದಲ್ಲಿರುವ ಅವರ ಸ್ಮಾರಕ ಎಲ್ಲರ ಗೌರವಕ್ಕೆ ಪಾತ್ರವಾಗಿದೆ.
ಜಸ್ವಂತ್ ಸಿಂಗ್ 1962, ನವಂಬರ್‌ನಲ್ಲಿ ಅರುಣಾಚಲ ಪ್ರದೇಶದ ನೌರಾನಂಗ್ ಪ್ರದೇಶದಲ್ಲಿ ತನ್ನ ನೆಲೆಯಲ್ಲಿ 72 ಗಂಟೆಗಳ ಕಾಲ ಕಾಲೂರಿ ನಿಂತು ಚೀನಿ ಪಡೆಗಳನ್ನು ಹಿಮ್ಮೆಟ್ಟಿಸಿ ಏಕಾಂಗಿ ಸಾಹಸ ಮೆರೆದಿದ್ದರು. ಹುತಾತ್ಮರಾಗುವ ಮುನ್ನ ನೂರಾರು ಚೀನಿ ಸೈನಿಕರನ್ನು ಕೊಂದಿದ್ದರು. ಅವರು ಅಂದು ರಕ್ಷಿಸಿದ್ದ ನೆಲೆಯನ್ನು ಸ್ಮಾರಕವನ್ನಾಗಿಸಿ ಅವರ ಗೌರವಾರ್ಥ ಜಸವಂತಗಡ್ ಎಂದು ಹೆಸರಿಸಲಾಗಿದೆ. ಅವರು ದೈವತ್ವ ಗಳಿಸಿದ್ದಾರೆ ಎಂದು ನಂಬಿರುವ ಸ್ಥಳೀಯರು ಅವರನ್ನು ಬಾಬಾ ಜಸ್ವಂತ್ ಎಂದೇ ಕರೆಯುತ್ತಾರೆ, ಬಾಬಾ ತಮ್ಮನ್ನು ಎಲ್ಲ ತೊಂದರೆಗಳಿಂದ ಪಾರು ಮಾಡುತ್ತಾರೆ ಎಂದು ನಂಬಿದ್ದಾರೆ.
ಭಾರತೀಯ ಸೇನೆಯೂ ಅವರನ್ನು ಅಪಾರವಾಗಿ ಗೌರವಿಸುತ್ತಿದೆ. ಇಂದಿಗೂ ಈ ಮಾರ್ಗವಾಗಿ ಸಾಗುವ ಯೋಧನಿಂದ ಜನರಲ್‌ವರೆಗೆ ಪ್ರತಿಯೊಬ್ಬರೂ ಜಸ್ವಂತ್‌ರ ಸ್ಮಾರಕಕ್ಕೆ ಗೌರವ ಸಲ್ಲಿಸುತ್ತಾರೆ. ಅವರು ಈಗಲೂ ಕರ್ತವ್ಯ ನಿರ್ವಹಿಸುತ್ತಿರುವ ಕ್ರಿಯಾಶೀಲ ಯೋಧ ಎಂದೇ ಭಾರತೀಯ ಸೇನೆಯು ಪರಿಗಣಿಸಿದೆ. ಅವರಿಗೆ ಈಗಲೂ ವೇತನ,ಬಡ್ತಿ ಮತ್ತು ರಜೆ ದೊರೆಯುತ್ತವೆ. ಪ್ರತಿ ನಿತ್ಯ ಆರು ಯೋಧರು ಜಸ್ವಂತ್‌ರ ಸಮವಸ್ತ್ರಗಳಿಗೆ ಇಸ್ತ್ರಿ, ಅವರ ಶೂಗಳಿಗೆ ಪಾಲಿಷ್, ಊಟ ಪೂರೈಕೆ ಮತ್ತು ರಾತ್ರಿ ಮಲಗಲು ಹಾಸಿಗೆಯ ಸಿದ್ಧತೆ ಇತ್ಯಾದಿಗಳನ್ನು ನಿಷ್ಠೆಯಿಂದ ಮಾಡುತ್ತಾರೆ.
ಭಾಯಿಜಿಯ ಶೌರ್ಯ ಯಾವ ಮಟ್ಟದ್ದಾಗಿತ್ತೆಂದರೆ ಅವರು ಮೃತಪಟ್ಟ ನಂತರ ಚೀನಿ ಪಡೆಗಳು ಅವರ ತಲೆಯನ್ನು ಕತ್ತರಿಸಿ ತಮ್ಮೊಂದಿಗೆ ಒಯ್ದಿದ್ದವಾದರೂ ಬಳಿಕ ಗೌರವಸೂಚಕವಾಗಿ ಭಾರತಕ್ಕೆ ಮರಳಿಸಿದ್ದವು ಎಂದು ಜಸ್ವಂತ್ ತನ್ನ 21ನೆಯ ವರ್ಷದಲ್ಲಿ ಹುತಾತ್ಮರಾದಾಗ ಆರು ವರ್ಷ ಪ್ರಾಯದವರಾಗಿದ್ದ ವಿಜಯ್ ಹೇಳಿದರು.
ವಿಜಯ್ ಈ ವರ್ಷದ ನವಂಬರ್‌ನಲ್ಲಿ ತವಾಂಗ್‌ನಲ್ಲಿರುವ ಜಸ್ವಂತ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ.
‘‘ನಮ್ಮ ತಾಯಿ ಕಳೆದ ವರ್ಷ ನಿಧನರಾಗಿದ್ದಾರೆ. ತವಾಂಗ್‌ಗೆ ಭೇಟಿ ನಿಡಬೇಕೆಂದು ಆಕೆ ತುಂಬ ಬಯಸಿದ್ದರು. ಆದರೆ ಅಣ್ಣ ಜೀವಂತವಿದ್ದಾಗ ತಾಯಿ ಅಲ್ಲಿಗೆ ಬರುವುದನ್ನು ಬಯಸಿರಲಿಲ್ಲ, ಹೀಗಾಗಿ ತಾಯಿಯನ್ನು ನಾವಲ್ಲಿಗೆ ಕರೆದೊಯ್ದಿರಲಿಲ್ಲ ಎಂದು ವಿಜಯ್ ತಿಳಿಸಿದರು. ವಿಜಯ್‌ರ ಮಕ್ಕಳು ಕಳೆದ ವರ್ಷ ತವಾಂಗಗಗೆ ಭೇಟಿ ನೀಡಿದ್ದರು.
ಜಸ್ವಂತ್ ಕುಟುಂಬದಲ್ಲಿ ಸೇನೆಗೆ ಸೇರಿದ್ದವರು ಅವರೊಬ್ಬರೇ. ವಿಜಯ್ ಸರ್ವೆ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿಯಾಗಿದ್ದಾರೆ. ತನ್ನಿಬ್ಬರು ಪುತ್ರರು ಸೇನೆಗೆ ಸೇರಬೇಕೆಂದು ವಿಜಯ ಬಯಸಿದ್ದರಾದರೂ ಅದು ಸಾಧ್ಯವಾಗಿಲ್ಲ.







