ವಿಶೇಷ ತನಿಖಾ ತಂಡ ರಚಿಸಲು ಆಗ್ರಹಿಸಿ ಡಿವೈಎಫ್‌ಐ ಧರಣಿ
ಪಂಜಿಮೊಗರು ಜೋಡಿ ಕೊಲೆ ಪ್ರಕರಣ

ಮಂಗಳೂರು, ಜು.3: ಪಂಜಿಮೊಗರು ಜೋಡಿ ಕೊಲೆ (ತಾಯಿ ರಝಿಯಾ ಮತ್ತು ಮಗಳು ಫಾತಿಮಾ ಝುವಾ) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನೇಮಿಸಲ್ಪಟ್ಟ ‘ಸಿಐಡಿ’ ಬದಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಆಗ್ರಹಿಸಿ ಸೋಮವಾದ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿ ಧರಣಿ ನಡೆಸಿತು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ 2011ರ ಜೂ.28ರಂದು ಈ ಕೊಲೆ ನಡೆದಿದೆ. ಆದರೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಇನ್ನೂ ಸಾಧ್ಯವಾಗಿಲ್ಲ. ಅಂದಿನಿಂದ ಈವರೆಗೆ ಡಿವೈಎಫ್‌ಐ ಸಾಕಷ್ಟು ಹೋರಾಟ ನಡೆಸಿದೆ. ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಡಿವೈಎಫ್‌ಐ ಆಗ್ರಹಿಸಿದ್ದರೂ ಕೂಡ ಸರಕಾರ ಸಿಐಡಿಗೆ ಒಪ್ಪಿಸಿದೆ. ಸಿಐಡಿ ಈ ಪ್ರಕರಣವನ್ನು ಕೈಗೆತ್ತಿಕೊಂಡು 5 ವರ್ಷವಾದರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದರು.
ಸಿಐಡಿ ನಿಷ್ಪ್ರಯೋಜಕ ಕಾವಲು ನಾಯಿಯಾಗಿದೆ. ಯಾಕೆಂದರೆ ಈ ಹಿಂದೆ ಜಿಲ್ಲೆಯಲ್ಲಿ ನಡೆದ ಬೆಂಜನಪದವು ರಾಜೇಶ್ ಪೂಜಾರಿ, ತಣ್ಣೀರುಬಾವಿಯಲ್ಲಿ ನಡೆದ ಎ.ಜೆ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ರಾಧಾಕೃಷ್ಣನ್ ಕೊಲೆ ಪ್ರಕರಣವನ್ನೂ ಸಿಐಡಿ ಬೇಧಿಸಲು ವಿಫಲವಾಗಿದೆ. ಪಂಜಿಮೊಗರು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರ ಮಂಪರು ಪರೀಕ್ಷೆ ಮಾಡಿ ಎಂದರೂ ಸಿಐಡಿ ಮಾಡಿಲ್ಲ. ಹಾಗಾಗಿ ತನಿಖೆಯನ್ನು ಸಿಐಡಿಯಿಂದ ವಾಪಸ್ ಪಡೆಯಬೇಕು. ವಿಶೇಷ ತನಿಖಾ ತಂಡಕ್ಕೆ ನೀಡಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.
ಶಾಸಕರ ಮನೆಗೆ ಚಲೋ: ಕಳೆದ ಚುನಾವಣೆ ಸಂದರ್ಭ ಮೊಯ್ದಿನ್ ಬಾವಾ ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದರು. ಆದರೆ, ಶಾಸಕರಾದ ಬಳಿಕವೂ ಅವರು ಭರವಸೆ ಈಡೇರಿಸಿಲ್ಲ. ಹಾಗಾಗಿ ಶಾಸಕರ ಮನೆಗೆ ಚಲೋ ಮಾಡುವುದಾಗಿ ಎಂದು ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಹೇಳಿದರು.
ಧರಣಿಯಲ್ಲಿ ರಝಿಯಾರ ಪತಿ ಹಮೀದ್, ಜನವಾದಿ ಮಹಿಳಾ ಸಂಘಟನೆಯ ಜಯಂತಿ ಬಿ. ಶೆಟ್ಟಿ, ಶಮೀಮಾ ತಣ್ಣೀರುಬಾವಿ, ಭಾರತಿ ಬೋಳಾರ್, ಜಯಲಕ್ಷ್ಮಿ, ಆಶಾ ಬೋಳಾರ್, ಸಿಲ್ವಿಯಾ ಜೋಕಟ್ಟೆ, ಅಬೂಬಕರ್ ಜೋಕಟ್ಟೆ, ರಫೀಕ್ ಹರೇಕಳ, ಸಾದಿಕ್ ಕಣ್ಣೂರು, ಅಶ್ರಫ್ ಹರೇಕಳ, ಹಬೀಬ್ ಖಾದರ್, ಮುಹಮ್ಮದ್ ಸಾಲಿ ಮತ್ತಿತರರು ಪಾಲ್ಗೊಂಡಿದ್ದರು.
ತನಿಖೆಯ ದಡ ಸೇರಿಸಿ: ಈ ಕೊಲೆ ಕೃತ್ಯ ನಡೆದು 6 ವರ್ಷವಾಗಿದೆ. ಸಿಐಡಿಗೆ ವಹಿಸಿ 5 ವರ್ಷವಾಗಿದೆ. ತನಿಖಾ ತಂಡದ 7-8 ಅಧಿಕಾರಿಗಳು ಬದಲಾವಣೆಯಾದರೂ ಪ್ರಕರಣ ಭೇದಿಸಲು ಆಗಿಲ್ಲ.
ನನ್ನ ಸಹಿತ ಮೂವರನ್ನು ಮಂಪರು ಪರೀಕ್ಷೆ ನಡೆಸಬೇಕು ಎಂಬ ಕೂಗು ಇತ್ತು. ಆ ಹಿನ್ನಲೆಯಲ್ಲಿ ಸ್ವತ: ನಾನೇ ಮಂಪರು ಪರೀಕ್ಷೆಗೆ ಅವಕಾಶ ಮಾಡಿಕೊಡಿ ಎಂದು ನ್ಯಾಯಾಲಯದ ಅನುಮತಿ ಪಡೆದುಕೊಟ್ಟೆ. ಆದರೆ ಇನ್ನೂ ಮಂಪರು ಪರೀಕ್ಷೆ ಮಾಡಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ದೆಹಲಿಯರವೆಗೂ ಹೋಗಿ ಬಂದೆ. ಆದರೂ ಪ್ರಯೋಜನವಾಗಿಲ್ಲ. ನಾನು ಯಾವ ತನಿಖೆಗೂ ಸಿದ್ಧ. ಎಲ್ಲ ರೀತಿಯ ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದು ರಝಿಯಾರ ಪತಿ ಹಮೀದ್ ಹೇಳಿದರು.







