ರಾಜ್ಯ ರೈತ ಸಂಘ-ಹಸಿರು ಸೇನೆಯಿಂದ ಧರಣಿ

ಮಂಗಳೂರು, ಜು.3: ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ಸಾಲಗಳನ್ನು ಮನ್ನಾ ಮಾಡಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಸೋಮವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿತು.
ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ರವಿಕಿರಣ್ ಪುಣಚ ರಾಜ್ಯ ಸರಕಾರವು ರೈತರ 50 ಸಾವಿರ ರೂ. ಸಾಲವನ್ನು ಮಾಡಿರುವುದು ಸ್ವಾಗತಾರ್ಹ. ಪ್ರಸ್ತುತ ಹಿಂಆರು ಮತ್ತು ಮುಂಗಾರು ಬೆಳೆಗಳಲ್ಲಿ ನಷ್ಟ ಸಂಭವಿಸಿದ್ದು, ರೈತರು ಕಂಗಾಲಾಗಿದ್ದಾರೆ. ಹಾಗಾಗಿ ಅದನ್ನು ಮನ್ನಾ ಮಾಡಬೇಕು ಮತ್ತು ಪ್ರಸಕ್ತ ಸಾಲಿಗೆ ಹೊಸ ಸಾಲ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರವು ಉದ್ಯಮಿಗಳ 6 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದರೂ ರೈತರ ಸಾಲ ಮನ್ನಾ ಮಾಡಲು ಮುಂದಾಗಿಲ್ಲ. ಬದಲಾಗಿ ಕೇಂದ್ರ ಸಚಿವರೊಬ್ಬರು ಈ ಬಗ್ಗೆ ವ್ಯಂಗ್ಯವಾಗಿ ಮಾತನಾಡಿ ರೈತರನ್ನು ಅವಮಾನಿಸಿದ್ದಾರೆ. ಸರಕಾರ ಸಾಲ ಮನ್ನಾ ಮಾಡುವುದಲ್ಲದೆ, ಅಡಿಕೆ, ತೆಂಗು, ಕೊಕ್ಕೊ, ಕಾಳುಮೆಣಸು, ರಬ್ಬರ್ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ರವಿಕಿರಣ್ ಪುಣಚ ಒತ್ತಾಯಿಸಿದರು.
ಪ್ರಾಕೃತಿಕ ವಿಕೋಪದ ಪರಿಹಾರ ಧನವು ಅವೈಜ್ಞಾನಿಕವಾಗಿದೆ. ಈ ಪದ್ಧತಿಯನ್ನು ರದ್ದುಗೊಳಿಸಿ ಜಿಲ್ಲಾ ಮಟ್ಟದಲ್ಲಿ ಕಂದಾಯ ಅಧಿಕಾರಿಗಳು ಕೃಷಿ ಮತ್ತು ತೋಟಗಾರಿಕ ಅಧಿಕಾರಿಗಳ ಸಮ್ಮುಖ ಸ್ಥಳೀಯವಾಗಿ ಬೆಳೆ ನಷ್ಟ ಅಂದಾಜಿಸಿ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರಲ್ಲದೆ, ಬಿಳಿಗೋಟಡಿಕೆಗೆ ಮೂರು ತಿಂಗಳ ಹಿಂದೆಯೇ ಕೇಂದ್ರ ಸರಕಾರ ಕ್ವಿಂಟಾಳ್‌ಗೆ 25 ಸಾವಿರ ರೂ. ಬೆಲೆ ನಿಗದಿ ಮಾಡಿದೆ. ಆದರೆ ಅದರ ಆಧಾರದಲ್ಲಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿಲ್ಲ ಎಂದರು.
ಈ ಸಂದರ್ಭ ರೈತ ಸಂಘದ ಮುಖಂಡರಾದ ತಾರನಾಥ ಗೌಡ, ರೂಪೇಶ್ ರೈ, ಮಂಜುನಾಥ ರೈ ಪರಾರಿ, ಪ್ರಸಾಧ್ಯ ಶೆಟ್ಟಿ ಪೆರಾಬೆ, ಯಾದವ ಶೆಟ್ಟಿ, ವಾಸುದೇವ ಉಚ್ಚಿಲ್ ಮತ್ತಿತರರಿದ್ದರು.







