ಕಾರ್ಮಿಕರ ಖಾಯಮಾತಿಗೆ ದಸಂಸ ಆಗ್ರಹ
ಮಂಗಳೂರು, ಜು.3: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಚರಂಡಿ ವಿಭಾಗದಲ್ಲಿ ಕಳೆದ 25 ವರ್ಷದಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ 156 ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯ ಮಂಗಳೂರು ತಾಲೂಕು ಘಟಕ ಆಗ್ರಹಿಸಿದೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಾಲೂಕು ಅಧ್ಯಕ್ಷ ಜಗದೀಶ್ ಪಾಂಡೇಶ್ವರ 10 ದಿನದೊಳಗೆ ಮನಪಾ ಈ ನೌಕರರನ್ನು ಖಾಯಂಗೊಳಿಸಬೇಕು. ಇಲ್ಲದಿದ್ದರೆ ಮನಪಾ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಕಾರ್ಮಿಕರು ಕೊಟ್ಟಾರ ಚೌಕಿ, ಸುಲ್ತಾನ್ ಬತ್ತೇರಿ, ಕೋಡಿಕಲ್, ದಂಬೇಲ್‌ನಲ್ಲಿ ಶೌಚಾಲಯ, ನೀರು, ಶೆಲ್ಟರ್‌ನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸುಲ್ತಾನ್ ಬತ್ತೇರಿ,ಕೊಟ್ಟಾರ ಚೌಕಿ,ಕುಲಶೇಖರದಲ್ಲಿ ಡ್ರೆಸ್ಸಿಂಗ್ ರೂಮ್ ಕೂಡ ವ್ಯವಸ್ಥಿತವಾಗಿಲ್ಲ. ಮುಳಿಹಿತ್ಲುವಿನ ನಾಲ್ಕು ಹೊರ ಗುತ್ತಿಗೆ ಕಾರ್ಮಿಕರಿಗೆ ತಲಾ 10,360 ರೂ. ಮಾಸಿಕ ವೇತನ ನೀಡಬೇಕಿದ್ದರೂ ಬೆಂಗಳೂರು ಮೂಲದ ಜಿಇಎಸ್‌ಟಿ ಸಂಸ್ಥೆ ಕೇವಲ 7 ಸಾವಿರ ರೂ. ನೀಡಿ ಶೋಷಿಸುತ್ತಿದೆ. ಇವರಿಗೆ ಇಎಸ್‌ಐ, ಫಿಎಫ್ ಕೂಡ ಇಲ್ಲ. ಈ ಬಗ್ಗೆ ಮನಪಾಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ತಕ್ಷಣ ಇದಕ್ಕೆ ಸ್ಪಂದಿಸಬೇಕು ಎಂದು ಜಗದೀಶ್ ಪಾಂಡೇಶ್ವರ ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಆಂಜನೇಯ 11 ಸಾವಿರ ಪೌರಕಾರ್ಮಿಕರ ಖಾಯಂ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ, ಮನಪಾ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರ ಖಾಯಮಾತಿಗೆ ಒಲವು ತೋರಿಸದಿದ್ದುದು ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ಕೆ. ಚಂದ್ರ ಕಡಂದಲೆ, ಕೇಶವ ಪಚ್ಚನಾಡಿ, ಶಿವಾನಂದ ಬಲ್ಲಾಳ್‌ಬಾಗ್, ವಿನೋದ್, ಚರಣ್, ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.







