ಸಚಿವ ರೈ ಆಪ್ತನ ಫೋಟೊ ಮಾರ್ಕ್ ಮಾಡಿ ಅಪಪ್ರಚಾರ: ಪೊಲೀಸ್ ಆಯುಕ್ತರಿಗೆ ದೂರು

ಮಂಗಳೂರು, ಜು.3: ಮುಲ್ಕಿ ಸುಖಾನಂದ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಜ್ಪೆಯ ಎಕ್ಕೂರ್ ಬಶೀರ್ ಎಂಬವರ ಫೋಟೊವನ್ನು ಜೋಡಿಸಿ ಸಚಿವ ರಮಾನಾಥ ರೈ ಆಪ್ತ ಎಂದು ಬಿಂಬಿಸಿ ಅಪಪ್ರಚಾರ ಮಾಡಿದ ಬಗ್ಗೆ ಬಶೀರ್ ಎಂಬವರು ಡಿವೈಎಫ್‌ಐ ನಿಯೋಗದೊಂದಿಗೆ ಸೋಮವಾರ ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.
ಸುಖಾನಂದ ಶೆಟ್ಟಿಯ ಕೊಲೆಗಾರ ಎಕ್ಕೂರ್ ಬಶೀರ್ ಎಂದು ಬಿಂಬಿಸಲು ಸಚಿವ ರಮಾನಾಥ ರೈ ಜೊತೆ ಅವರ ಆಪ್ತ ಸಹಾಯಕ ಎಕ್ಕೂರ್ ಬಶೀರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಕಲ್ಪಿಸಿಕೊಡಲು ಮನವಿ ಮಾಡಿದ್ದಾರೆ.
ಸುಖಾನಂದ ಶೆಟ್ಟಿಯ ಕೊಲೆಗೂ ತನಗೂ ಯಾವ ಸಂಬಂಧವೂ ಇಲ್ಲ. ಸಚಿವ ರಮಾನಾಥ ರೈಯ ಪರಿಚಯವೂ ತನಗಿಲ್ಲ. ಆದರೂ ತನ್ನ ಫೋಟೋವನ್ನು ಎಡಿಟ್ ಮಾಡಿ ವೀಡಿಯೊ ವೈರಲ್ ಮಾಡಲಾಗಿದೆ. ಇದರಿಂದ ತನ್ನ ಮಾನಹಾನಿಯಾಗಿದೆ. ಜೀವಭಯವೂ ಉಂಟಾಗಿದೆ ಎಂದು ಎಕ್ಕೂರು ಬಶೀರ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಬಜ್ಪೆ ಗ್ರಾಪಂ ಮಾಜಿ ಸದಸ್ಯ ನಾಸಿರ್, ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಸಾಲಿ ನಿಯೋಗದಲ್ಲಿದ್ದರು. ಈ ನಿಯೋಗವು ಉಸ್ತುವಾರಿ ಸಚಿವ ರಮಾನಾಥ ರೈಯವರನ್ನೂ ಭೇಟಿಯಾಗಿ ನ್ಯಾಯ ದೊರಕಿಸಿಕೊಡಲು ಒತ್ತಾಯಿಸಿತು.







