ನವ ವಸಾಹತು ಪದ್ಧತಿಯ ಸಾಧ್ಯತೆ: ರಾಮ ಮಾಧವ

ಹೊಸದಿಲ್ಲಿ,ಜು.3: ದೇಶಗಳು ಹಣ, ಮಾರುಕಟ್ಟೆ ಮತ್ತು ಸೇನೆಯ ಮೂಲಕ ಪರಸ್ಪರರನ್ನು ಮೀರಿಸುವ ಪೈಪೋಟಿಯಲ್ಲಿದ್ದು, ಇದರಿಂದಾಗಿ ಹಿಂದು ಮಹಾಸಾಗರ ದಲ್ಲಿಯ ಭೂರಾಜಕೀಯ ಸ್ಥಿತಿಯು ‘ನವ ವಸಾಹತು ಪದ್ಧತಿ’ಯನ್ನು ಸಂಭಾವ್ಯವನ್ನಾಗಿಸಿದೆ ಎಂದು ಹಿರಿಯ ಬಿಜೆಪಿ ನಾಯಕ ರಾಮ ಮಾಧವ ಅವರು ಸೋಮವಾರ ಇಲ್ಲಿ ಹೇಳಿದರು.
‘‘ಭಾರತ-ವಿಯೆಟ್ನಾಂ ಸಂಬಂಧಗಳಲ್ಲಿ ಮೂಡುತ್ತಿರುವ ಹೊಸ ಕ್ಷಿತಿಜ’ ಕುರಿತು ವ್ಯಾಖ್ಯಾನ ನೀಡುತ್ತಿದ್ದ ಅವರು, ವಸಾಹತುಶಾಹಿಯ ಕೆಡುಕುಗಳು ನಮಗೆ ತಿಳಿದಿವೆ. ಅವು ನಮ್ಮ ಮನಸ್ಸುಗಳಲ್ಲಿ ತಾಜಾ ಆಗಿ ಉಳಿದುಕೊಂಡಿವೆ. ಅದೇ ವಸಾಹತುಶಾಹಿಯ 21ನೇ ಶತಮಾನದ ಆವೃತ್ತಿಯು ನಮ್ಮ ಪಾಲಿಗೆ ಮತ್ತೆ ಪಿಡುಗಾಗದಂತೆ ನಾವು ನೋಡಿಕೊಳ್ಳುವುದು ಮಹತ್ವದ್ದಾಗಿದೆ ’’ಎಂದರು.
ದಕ್ಷಿಣ ಚೀನಾ ಸಮುದ್ರದಲ್ಲಿಯ ಸ್ಪ್ರೆಟ್ಲಿ ದ್ವೀಪ ಸಮೂಹದ ಮೇಲೆ ತನ್ನ ಹಕ್ಕು ಪ್ರತಿಪಾದನೆಯನ್ನು ಚೀನಾ ಹೆಚ್ಚಿಸುತ್ತಿರುವ ನಡುವೆಯೇ ಮಾಧವ ಅವರ ಈ ಹೇಳಿಕೆ ಹೊರಬಿದ್ದಿದೆ. ವಿಯೆಟ್ನಾಂ ಮತ್ತು ತೀರಪ್ರದೇಶದಲ್ಲಿಯ ಇತರ ಆಗ್ನೇಯ ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳು ಈ ದ್ವೀಪಸಮೂಹದ ಮೇಲೆ ತಮ್ಮ ಹಕ್ಕುಗಳನ್ನು ಸಾಧಿಸುತ್ತಿವೆಯಾದರೂ ಚೀನಾ ಅವುಗಳನ್ನು ಕಡೆಗಣಿಸಿದೆ.
ಇಂತಹ ಎಲ್ಲ ಶಕ್ತಿಗಳು ಮತ್ತು ಪ್ರವೃತ್ತಿಗಳನ್ನು ವಿಫಲಗೊಳಿಸಲು ಭಾರತ ಮತ್ತು ವಿಯೆಟ್ನಾಂ ಜಂಟಿಯಾಗಿ ಮತ್ತು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಮಾಧವ ಒತ್ತಿ ಹೇಳಿದರು.
ಸಿಕ್ಕಿಂ ಬಳಿ ಡೋಕ ಲಾ ಪ್ರದೇಶದಲ್ಲಿ ಭಾರತ ಮತ್ತು ಚೀನಿ ಸೇನೆಗಳ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿಯೂ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ದ.ಚೀನಾ ಸಮುದ್ರದಲ್ಲಿ ಭಾರತವೂ ವಾಣಿಜ್ಯಿಕ ಹಿತಾಸಕ್ತಿಯನ್ನು ಹೊಂದಿದೆ.
ಭಾರತ-ಪೆಸಿಫಿಕ್ ಪ್ರದೇಶವು ನೂತನ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಮಾಧವ ಇದೇ ವೇಳೆ ಹೇಳಿದರು.







