ಕಟ್ಟಡ ಕಾರ್ಮಿಕರ ರಾಜ್ಯ ಸಮ್ಮೇಳನ ಉದ್ಘಾಟಿಸಿದ ದಿಬಂಜನ್ ಚಕ್ರವರ್ತಿ
ಬಲಪಂಥೀಯವಾದ ರಾಜಕೀಯ ಹಿಮ್ಮೆಟ್ಟಿಸಲು ಒಗ್ಗಟ್ಟು ಮುಖ್ಯ

ಕುಂದಾಪುರ, ಜು.3: ಕೇಂದ್ರದಲ್ಲಿರುವ ಮೋದಿ ಸರಕಾರ ಧರ್ಮದ ಹೆಸರಿನಲ್ಲಿ ಯುವಜನರ ಮಧ್ಯೆ ದ್ವೇಷವನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದೆ. ಇಂದು ಈ ದೇಶದಲ್ಲಿನ ರಾಜಕೀಯವು ಬಲಪಂಥೀಯವಾದದತ್ತ ಸಾಗುತ್ತಿದೆ. ಇದನ್ನು ಎದುರಿಸಲು ಎಡಪಂಥೀಯರಿಂದ ಮಾತ್ರ ಸಾಧ್ಯ. ಕಾರ್ಮಿಕ ಒಗ್ಗಟ್ಟಾ ಗುವ ಮೂಲಕ ಬಲಪಂಥೀಯವಾದ ರಾಜಕೀಯವನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದು ಸಿಡಬ್ಲ್ಯೂಎಫ್‌ಐನ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ನವದೆಹಲಿಯ ದಿಬಂಜನ್ ಚಕ್ರವರ್ತಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಆಶ್ರಯದಲ್ಲಿ ಕುಂದಾಪುರ ಹೆಂಚು ಕಾರ್ಮಿಕರ ಭವನದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಕಟ್ಟಡ ಕಾರ್ಮಿಕರ ಮೂರನೆ ರಾಜ್ಯ ಸಮ್ಮೇಳನವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ದೇಶದಲ್ಲಿ ಎಲ್ಲ ಧರ್ಮೀಯರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಆದರೆ ಸಂಘಪರಿವಾರ ಧರ್ಮದ ವಿಷಬೀಜ ಬಿತ್ತಿ ಜನರನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದ ಅವರು, ಈ ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರಿದ್ದರೂ ಕೂಡ ಬೀದಿಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ, ಮನೆ ಗಳಲ್ಲಿ ನಿರಂತರವಾದ ದಾಳಿಗಳು ನಡೆಯುತ್ತಿವೆ. ಜವಾಬ್ದಾರಿಯುತ ಕಾರ್ಮಿಕ ರಾದ ನಾವು ಇಂತಹ ದಾಳಿಗಳನ್ನು ವಿರೋಧಿಸಬೇಕಿದೆ ಎಂದರು.
ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕಾದ ಸರಕಾರಗಳು ಬಹುರಾಷ್ಟ್ರಿಯ ಕಂಪೆನಿಗಳ, ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕರ ನಿಧಿಯನ್ನು ಬೇರೆ ಬೇರೆ ಕೆಲಸಗಳಿಗೆ ಬಳಸಿಕೊಳ್ಳಲು ಮುಂದಾಗುತ್ತಿವೆ. ಇದನ್ನು ನಾವು ವಿರೋಧಿಸಲೇಬೇಕು ಎಂದು ಅವರು ಕರೆ ನೀಡಿದರು.
1971ರಿಂದ ದೇಶದ 29 ರಾಜ್ಯಗಳಲ್ಲಿ ಜಾರಿಯಾದ ಬೀಡಿ ಕಾರ್ಮಿಕರ ಕಲ್ಯಾಣ ನಿಧಿಯನ್ನು ವಿಲೀನ ಮಾಡಲಾಗಿದೆ. ಇದರಿಂದ ಬೀಡಿ ಕಾರ್ಮಿಕರು ಪಿಂಚಣಿ, ವಸತಿ, ವೈದ್ಯಕೀಯ ನಿಧಿಗಳಿಂದ ವಂಚಿತರಾಗುವ ಸಾಧ್ಯತೆಗಳಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಸಿಡಬ್ಲ್ಯೂಎಫ್‌ಐ ರಾಜ್ಯಾಧ್ಯಕ್ಷ ವೀರಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರಾಧ್ಯಕ್ಷ ಸಿಂಗಾರವೇಲು, ಕೇರಳ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಸಿ.ಎ.ಜೋಸೆಫ್, ಸಿಡಬ್ಲ್ಯೂಎಫ್‌ಐ ತೆಲಂಗಾಣ ರಾಜ್ಯದ ಕೊಟ್ಟಂ ರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹಾಂತೇಶ್, ಸಿಐಟಿಯು ಜಿಲ್ಲಾಧ್ಯಕ್ಷ ವಿಶ್ವನಾಥ ರೈ, ಸಿಐಟಿಯು ತಾಲೂಕು ಅಧ್ಯಕ್ಷ ಎಚ್.ನರಸಿಂಹ, ಮುಖಂಡ ಬಾಲಕೃಷ್ಣ ಶೆಟ್ಟಿ, ಸ್ವಾಗತ ಸಮಿತಿ ಕೋಶಾಧಿಕಾರಿ ಶೇಖರ ಬಂಗೇರ ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ಹಾಗೂ ಎಸೆಸ್ಸೆಲ್ಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕ ಪಡೆದ ಕಟ್ಟಡ ಕಾರ್ಮಿಕರ ಮಕ್ಕಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ಯು.ದಾಸ ಭಂಡಾರಿ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ ಕಲ್ಲಾಗರ ವಂದಿಸಿದರು.
ಜಿಎಸ್‌ಟಿಯಿಂದ ಕೆಟ್ಟ ದಿನಗಳು
ಜಿಎಸ್‌ಟಿಯಿಂದ ದೇಶದ ಜನರು ಒಳ್ಳೆಯ ದಿನಗಳನ್ನು ಕಾಣಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ಇಂದು ಸಕ್ಕರೆ, ಅಕ್ಕಿ, ಬಟ್ಟೆಗಳ ದರ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಕಾರ್ಮಿಕರಿಗೆ, ರೈತರಿಗೆ ಒಳ್ಳೆಯ ದಿನಗಳು ಬರುವ ಬದಲು ಕೆಟ್ಟ ದಿನಗಳು ಬಂದಿವೆ. ಈ ಸುಧಾರಣೆಯ ವಿರುದ್ದ ಐಕ್ಯ ಹೋರಾಟಕ್ಕೆ ಸಜ್ಜಾಗಬೇಕು ಎಂದು ದಿಬಂಜನ್ ಚಕ್ರವರ್ತಿ ಹೇಳಿದರು.







