ದೇಶದ ನೂತನ ಅಟಾರ್ನಿ ಜನರಲ್ ಆಗಿ ಕೆ.ಕೆ.ವೇಣುಗೋಪಾಲ ಅಧಿಕಾರ ಸ್ವೀಕಾರ

ಹೊಸದಿಲ್ಲಿ,ಜು.3: ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಕೆ.ಕೆ.ವೇಣುಗೋಪಾಲ ಅವರು ಭಾರತದ ನೂತನ ಅಟಾರ್ನಿ ಜನರಲ್ ಆಗಿ ಸೋಮವಾರ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಅವರ ಪೂರ್ವಾಧಿಕಾರಿ ಮುಕುಲ್ ರೋಹಟ್ಗಿ ಉಪಸ್ಥಿತರಿದ್ದರು.
ರೋಹಟ್ಗಿ ಜೂ.11ರಂದು ನಿವೃತ್ತರಾದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರಣವ ಮುಖರ್ಜಿ ಅವರು ಕಳೆದ ವಾರ ವೇಣುಗೋಪಾಲ ನೇಮಕಕ್ಕೆ ಒಪ್ಪಿಗೆ ಸೂಚಿಸಿದ್ದರು.
ಐದು ದಶಕಗಳ ಕಾನೂನು ಅನುಭವ ಹೊಂದಿರುವ ವೇಣುಗೋಪಾಲ(86) ಅಟಾರ್ನಿ ಜನರಲ್ ಹುದ್ದೆಯನ್ನು ಅಲಂಕರಿಸಿರುವ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.
1960ರ ದಶಕದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಕಾಲತ್ ಆರಂಭಿಸಿದ್ದ ವೇಣುಗೋಪಾಲ ಅವರಿಗೆ 1972ರಲ್ಲಿ ಹಿರಿಯ ನ್ಯಾಯವಾದಿಯೆಂದು ಮಾನ್ಯತೆ ಲಭಿಸಿತ್ತು. ಕೇಂದ್ರದಲ್ಲಿ ಜನತಾ ಪಕ್ಷದ ಸರಕಾರವಿದ್ದಾಗ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದ ಅವರು ಬಳಿಕ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಪರ ವಾದಿಸಿದ್ದರು.
2015ರಲ್ಲಿ ಅವರು ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.
Next Story





