ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಮನ್ನಾ ಮಾಡಿ: ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು, ಜು.3: ರಾಜ್ಯದಲ್ಲಿನ ತೀವ್ರ ಸ್ವರೂಪದ ಬರ, ಬೆಳೆ ಹಾನಿ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಕರ್ನಾಟಕದ ರೈತರು ಪಡೆದಿರುವ ಬೆಳೆ ಸಾಲಮನ್ನಾ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಶೇ.20ರಷ್ಟು ರೈತರು ಸಹಕಾರ ಬ್ಯಾಂಕುಗಳ ಮೂಲಕ ಸಾಲ ಪಡೆದಿದ್ದು, ಈಗಾಗಲೇ ರೈತರ 50 ಸಾವಿರ ರೂ.ಗಳ ವರೆಗಿನ ಸಾಲಮನ್ನಾ ಮಾಡಲಾಗಿದೆ. ಇದರಿಂದ 22.27ಲಕ್ಷಕ್ಕೂ ಅಧಿಕ ಮಂದಿ ರೈತರಿಗೆ ಅನುಕೂಲವಾಗಿದೆ. ಆದರೆ, ರಾಜ್ಯದ ಶೇ.80ರಷ್ಟು ರೈತರು ವಾಣಿಜ್ಯ ಬ್ಯಾಂಕುಗಳ ಮೂಲಕ ಸಾಲ ಪಡೆದಿದ್ದು, ಕೇಂದ್ರ ಸರಕಾರ ಸಾಲಮನ್ನಾ ಮೂಲಕ ಆ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.
2017ರ ಮಾರ್ಚ್ 31ಕ್ಕೆ ರಾಜ್ಯದ 51 ಲಕ್ಷ ಮಂದಿ ರೈತರು ಒಟ್ಟು 52,744.28 ಕೋಟಿ ರೂ.ಬೆಳೆ ಸಾಲ ಪಡೆದಿದ್ದಾರೆ. ಆ ಪೈಕಿ 28.73 ಲಕ್ಷ ರೈತರು 42,007.47 ಕೋಟಿ ರೂ.ಸಾಲವನ್ನು ವಾಣಿಜ್ಯ ಬ್ಯಾಂಕುಗಳಿಂದ ಪಡೆದಿದ್ದಾರೆ. ಹೀಗಾಗಿ ಆ ರೈತರ ಸಾಲಮನ್ನಾಕ್ಕೆ ಕೇಂದ್ರ ಮುಂದಾಗಬೇಕೆಂದು ಅವರು ಮನವಿ ಮಾಡಿದ್ದಾರೆ.





